

ಬೆಂಗಳೂರು: ‘ಬೇಲ್’ ಬಳಿಕ ನಟ ಶಿವರಾಜಕುಮಾರ್ ತಮಿಳಿನ ‘ಜೈಲರ್ 2’ ರಿಲೀಸ್‌ಗೆ ಎದುರು ನೋಡುತ್ತಿದ್ದು, ಜತೆಗೆ ಸಾಲು ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಸದ್ಯ ಅವರು, ಶ್ರೀನಿ ನಿರ್ದೇಶಿಸುತ್ತಿರುವ ‘ಎ ಫಾರ್ ಆನಂದ್’ ಚಿತ್ರೀಕರಣದಲ್ಲಿದ್ದಾರೆ. ಕಳೆದ ಮೇನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ಈ ಚಿತ್ರದ ಶೂಟಿಂಗ್ ಇದೀಗ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆರಂಭಗೊಂಡಿದೆ. ಇನ್ನು ಚಿತ್ರದ ನಾಯಕಿ ಯಾರು ಎಂಬುದರ ಬಗ್ಗೆ ಚಿತ್ರತಂಡ ಈವರೆಗೆ ಮಾಹಿತಿ ನೀಡಿರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಾಯಕಿ ಪಾತ್ರಕ್ಕಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ರನ್ನು ಸಂಪರ್ಕಿಸಿರುವ ವಿಚಾರ ಮುನ್ನೆಲೆಗೆ ಬಂದಿತ್ತು. ನಿರ್ದೇಶಕ ಶ್ರೀನಿ, ‘ಮಾಧುರಿ ಅವರನ್ನು ಸಂಪರ್ಕಿಸಿರುವುದು ನಿಜ’ ಎಂದು ಒಪ್ಪಿಕೊಂಡಿದ್ದರು. ನಟ ಶಿವರಾಜಕುಮಾರ್ ಕೂಡ, ‘ಅವರಿಗೆ ಕಥೆ ಮತ್ತು ಪಾತ್ರ ಇಷ್ಟವಾಗಿತ್ತು. ನಮ್ಮ ಬ್ಯಾನರ್ ಸಿನಿಮಾ ಅಂತ ಗೊತ್ತಾಗಿ ನಟಿಸಲು ಉತ್ಸಾಹ ತೋರಿದ್ದರು. ಆದರೆ, ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುವ ಕಾರಣ ಸಮಸ್ಯೆಯಾಗಲಿದೆ’ ಎಂದು ಬೇಸರದಿಂದಲೇ ಹೇಳಿಕೊಂಡರು’ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಇದೀಗ ಮಾಧುರಿ ಜಾಗಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಆಗಮಿಸಿದ್ದಾರೆ. ಅವರು ಕೂಡ ಕಥೆ ಕೇಳಿ, ಇಷ್ಟವಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅಂತೆಯೇ, ಬುಧವಾರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ‘ಎ ಫಾರ್ ಆನಂದ್’ ಚಿತ್ರದ ಮೊದಲ ದಿನದ ಶೂಟಿಂಗ್‌ನಲ್ಲಿ ರವೀನಾ ಟಂಡನ್ ಭಾಗವಹಿಸಿದ್ದು, ಆ ಮೂಲಕ ಅವರು ಸಿನಿಮಾದಲ್ಲಿರುವುದನ್ನು ಖಚಿತಪಡಿಸಿದ್ದಾರೆ.
ಅಷ್ಟಕ್ಕೂ ರವೀನಾ ಟಂಡನ್ ಕನ್ನಡಕ್ಕೇನೂ ಹೊಸಬರಲ್ಲ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚುತ್ತಿರುವಾಗಲೇ ‘ಉಪೇಂದ್ರ’ (1999) ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿ, ಗಮನಸೆಳೆದಿದ್ದರು. ಅದಾದ 23 ವರ್ಷಗಳ ಬಳಿಕ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಮೂಲಕ ಅವರು ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದರು. ಈ ಚಿತ್ರದಲ್ಲಿ ರವೀನಾ ನಿರ್ವಹಿಸಿದ್ದ ರಮಿಕಾ ಸೇನ್ ಪಾತ್ರಕ್ಕೆ ಮೆಚ್ಚುಗೆಗೆ ವ್ಯಕ್ತವಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ‘ಎ ಫಾರ್ ಆನಂದ್’ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ರವೀನಾ ಮರಳಿದ್ದಾರೆ. ಇಲ್ಲಿ ರವೀನಾ ಟಂಡನ್ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡವು ಅವರನ್ನು ಸ್ವಾಗತಿಸಿರುವ ವಿಡಿಯೋವನ್ನು ಹರಿಬಿಡಲಾಗಿದೆ. ‘ಘೋಸ್ಟ್’ ಬಳಿಕ ನಟ ಶಿವರಾಜಕುಮಾರ್ ಮತ್ತು ನಿರ್ದೇಶಕ ಶ್ರೀನಿ ಜೋಡಿ ‘ಎ ಫಾರ್ ಆನಂದ್’ ಮೂಲಕ ಒಂದಾಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.