

ಬೆಂಗಳೂರು: ರಮೇಶ್ ಅರವಿಂದ್ ನಟಿಸುತ್ತಿರುವ 106ನೇ ಸಿನಿಮಾ "ದೈಜಿ'. ಇದೊಂದು ಸೈಕಲಾಜಿಕಲ್ ಮಿಸ್ಟರಿ ಹಾರರ್ ಥ್ರಿಲ್ಲರ್ ಚಿತ್ರವಾಗಿದ್ದು, ಟೈಟಲ್, ಪೋಸ್ಟರ್ ಮೂಲಕವೇ ಕುತೂಹಲ ಮೂಡಿಸಿದೆ. ಜತೆಗೆ "ಶಿವಾಜಿ ಸುರತ್ಕಲ್' ಸರಣಿಯ ಯಶಸ್ಸಿನ ಬಳಿಕ ನಿರ್ದೇಶಕ ಆಕಾಶ್ ಶ್ರೀವತ್ಸ ಜತೆ ರಮೇಶ್ ಅರವಿಂದ್ ಮೂರನೇ ಬಾರಿಗೆ ಕೈಜೋಡಿಸಿದ್ದು, ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ರಿಲೀಸ್ ದಿನಾಂಕ ಘೋಷಿಸಿದ್ದು, 2027ರ ಜ.14ರಂದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ರಮೇಶ್ ಜತೆ ರಾಧಿಕಾ ನಾರಾಯಣ್, ದಿಗಂತ್ ಮಂಚಾಲೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅವಿನಾಶ್, ಬಿಎಂ.ಗಿರಿರಾಜ್, ಅಲೆಕ್ಸಾಂಡರ್ ಟೈಲರ್, ಸ್ಯಾಂಡಿ ಹಿಗಿನ್ಸ್ ತಾರಾಗಣದಲ್ಲಿದ್ದಾರೆ. ನಿರ್ದೇಶಕ ಆಕಾಶ್ ಶ್ರೀವತ್ಸ, "ನೈಜ ಟನೆಗಳ ಆಧಾರದಲ್ಲಿ ಕಥೆ ರೂಪಿಸಿದ್ದೇವೆ. ಕಥೆಯಲ್ಲಿ ಸೂರ್ಯಕಾಂತಿ ಹೂವು ಪ್ರಮುಖ ಪಾತ್ರವಹಿಸುತ್ತದೆ. ಸೂರ್ಯನ ಬೆಳಕು, ಜೀವಚೈತನ್ಯ, ಭರವಸೆ ಮತ್ತು ಹೊಸತನದ ಸಂಕೇತವಾಗಿರುವ ಸೂರ್ಯಕಾಂತಿ, ಮಗುವಿನ ಜನನದ ಸುತ್ತಲಿನ ನಿಗೂಢತೆಗಳನ್ನು ಅನಾವರಣಗೊಳಿಸುವ ಈ ಚಿತ್ರದಲ್ಲಿ ಕುತೂಹಲಕಾರಿ ಅರ್ಥ ಪಡೆದುಕೊಂಡಿದೆ. ಪ್ರಮುಖ ಪಾತ್ರಗಳಾದ ಸೂರ್ಯ, ಭೂಮಿ ಮತ್ತು ಗಗನ ಹೆಸರುಗಳೂ ಪ್ರಕೃತಿಯ ಮೂರು ಮೂಲಭೂತ ಅಂಶಗಳನ್ನು ಪ್ರತಿಪಾದಿಸುತ್ತವೆ' ಎಂದು ಮಾಹಿತಿ ನೀಡುತ್ತಾರೆ ಆಕಾಶ್ ಶ್ರೀವತ್ಸ. ಚಿತ್ರಕ್ಕೆ ಜೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಮತ್ತು ಸಚಿನ್ ಬಸ್ರೂರ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣದಲ್ಲಿ ಮೂಡಿಬಂದಿರುವ "ದೈಜಿ'ಯ ಸಂಕಲನದ ಜವಾಬ್ದಾರಿಯನ್ನು ಖುದ್ದು ನಿರ್ದೇಶಕ ಆಕಾರ್ಶ ನಿರ್ವಹಿಸಿದ್ದಾರೆ.
ಮಕರ ಸಂಕ್ರಾಂತಿಯು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ. ಉತ್ತರಾಯಣದ ಶುಭಾರಂಭವೆಂದು ಪರಿಗಣಿಸಲಾಗುವ ಈ ಹಬ್ಬ ಪ್ರಕೃತಿ, ಸಮೃದ್ಧಿ ಮತ್ತು ಹೊಸ ಜೀವನದ ಸಂಕೇತ. ಸಂಕ್ರಾಂತಿ ಜೀವನದ ಸುಂದರ ಚಕ್ರವನ್ನು ಸಂಭ್ರಮಿಸಿದರೆ, "ದೈಜಿ' ಅದೇ ಜೀವನದ ಸುತ್ತ ಅಡಗಿರುವ ಕತ್ತಲೆಯ ನಿಗೂಢತೆಗಳನ್ನು ತೆರೆದಿಡಲು ಪ್ರಯತ್ನಿಸುತ್ತದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದ್ದೇವೆ.
ಆಕಾಶ್ ಶ್ರೀವತ್ಸ, ನಿರ್ದೇಶಕ.