

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಹಾಸ್ಯನಟ ಚಿಕ್ಕಣ್ಣ ಮದುವೆಯ ಸಂಭ್ರಮದಲ್ಲಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆ ನೆರವೇರಲಿದೆ. ಇದೇ ಸಂಭ್ರಮದಲ್ಲಿರುವ ನಟನಿಗೆ ಮತ್ತೊಂದು ಖುಷಿಯ ವಿಚಾರ ದೊರೆತಿದ್ದು, ಅವರ ‘ಲಕ್ಷ್ಮೀಪುತ್ರ’ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ‘ಉಪಾಧ್ಯಕ್ಷ’ ಯಶಸ್ಸಿನ ಬಳಿಕ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ‘ಲಕ್ಷ್ಮೀಪುತ್ರ’ ಕಳೆದ ಜನವರಿಯಲ್ಲಿಯೇ ಸೆಟ್ಟೇರಿತ್ತು. ಇದೀಗ ಶೂಟಿಂಗ್ ಪೂರ್ಣಗೊಂಡು, ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಾಗಿದೆ. ಇದೇ ನವೆಂಬರ್ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ನಿರ್ದೇಶಕ ಎ.ಪಿ.ಅರ್ಜುನ್ ಕಥೆ, ಚಿತ್ರಕಥೆ ಬರೆದಿದ್ದು, ವಿಜಯ್ ಎಸ್. ಸ್ವಾಮಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇದೇ ಖುಷಿಯಲ್ಲಿ ನಟ ಚಿಕ್ಕಣ್ಣ, ‘ನನ್ನ ವೃತ್ತಿಜೀವನ ಆರಂಭದ ದಿನಗಳಲ್ಲಿ ಗಣೇಶೋತ್ಸವ, ಕನ್ನಡ ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಅದೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ’ ಎಂದರು. ನಿರ್ಮಾಪಕ ಎ.ಪಿ.ಅರ್ಜುನ್, ‘ಮಂಡ್ಯದ ಸೊಗಡಿನಲ್ಲಿ ಸಾಗುವ ಈ ಸಿನಿಮಾ ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯದ ಜತೆಗೆ ಆರಂಭದಿಂದ ಕೊನೆಯವರೆಗೂ ಭರ್ಜರಿ ಹಾಸ್ಯ ಹಾಗೂ ಆಪ್ತವಾದ ಪ್ರೇಮ ಕಥೆ ಹೊಂದಿದೆ’ ಎಂದು ತಿಳಿಸಿದರು. ಇಲ್ಲಿ ಚಿಕ್ಕಣ್ಣಗೆ ವಂದಿತಾ ಗೌಡ ಜೋಡಿಯಾಗಿದ್ದು, ತಾರಾ ಅನುರಾಧಾ, ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಕಲಾಬಳಗದಲ್ಲಿದ್ದಾರೆ.