ಸಿಂಕ್ ಸೌಂಡ್ ಅಂತ ಹೇಳಿಲ್ಲ; ವಿವಾದಿತ ಪ್ರಶಸ್ತಿ ಬಗ್ಗೆ ಸಾಗರ್ ಪುರಾಣಿಕ್ ಸ್ಪಷ್ಟನೆ

Dollu
Published on

ಬೆಂಗಳೂರು: ಶುಕ್ರವಾರವಷ್ಟೇ 2020ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿವೆ. ಎಂದಿನಂತೆ ಈ ವರ್ಷ ಪ್ರಶಸ್ತಿಗಳ ಕುರಿತಾಗಿ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ಅದರಲ್ಲೂ, ‘ಡೊಳ್ಳು’ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಗ್ರಹಣ (ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್) ಪ್ರಶಸ್ತಿಯನ್ನು ಜೋಬಿನ್ ಜಯನ್ ಅವರಿಗೆ ಘೋಷಿಸಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದೆ. ಆಸ್ಕರ್ ಪುರಸ್ಕೃತ ಧ್ವನಿಗ್ರಾಹಕ ರೆಸೂಲ್ ಪೂಕ್ಕುಟ್ಟಿ ಸಹ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ. ಚಿತ್ರಕ್ಕೆ ಲೊಕೇಶನ್​ನಲ್ಲೇ ನೇರವಾಗಿ ಧ್ವನಿಯನ್ನು ಸಿಂಕ್ ಮಾಡಿಲ್ಲ, ಡಬ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು, ಚಿತ್ರಕ್ಕೆ ಕೆಲಸ ಮಾಡಿರುವ ನಿತಿನ್ ಲುಕೋಸ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಂಕ್ ಸೌಂಡ್ ಯಾವುದು, ಡಬ್ ಮಾಡಿರುವುದು ಯಾವುದು ಎಂದು ಆಯ್ಕೆ ಸಮಿತಿಗೆ ಗೊತ್ತಾಗದಿರುವುದು ದುರ್ದೈವ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಈ ಗೊಂದಲ ಯಾಕೆ? ಚಿತ್ರತಂಡದವರು ಯಾವ ವಿಭಾಗಕ್ಕೆ ಪ್ರಶಸ್ತಿ ಬರಬೇಕು ಎಂದು ಅರ್ಜಿ ಹಾಕಿದ್ದರು? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಈ ವಿಷಯವಾಗಿ ಚಿತ್ರತಂಡದವರು ಸಹ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿರುವುದಾಗಿ ‘ಡೊಳ್ಳು’ ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಹೇಳುತ್ತಾರೆ. ಈ ಕುರಿತು ವಿಜಯವಾಣಿ ಜತೆಗೆ ಮಾತನಾಡಿದವ ಅವರು, ‘ನಾವು ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸುವಾಗ, ಅಲ್ಲೆಲ್ಲೂ ಸಿಂಕ್ ಸೌಂಡ್​ನ ಉಲ್ಲೇಖವೇ ಇರಲಿಲ್ಲ. ಆಡಿಯೋಗ್ರಫಿ ಎಂಬ ವಿಭಾಗ ಮಾತ್ರ ಇತ್ತು. ನಮ್ಮ ಚಿತ್ರದ ಸೌಂಡಿಂಗ್ ಚೆನ್ನಾಗಿದ್ದರಿಂದ, ಆ ವಿಭಾಗಕ್ಕೆ ನಾವು ಟಿಕ್ ಮಾಡಿದ್ದೆವು. ಈಗ ಪ್ರಶಸ್ತಿ ಪಟ್ಟಿಯಲ್ಲಿ ಆಡಿಯೋಗ್ರಫಿ ವಿಭಾಗದಲ್ಲಿ ಬ್ರಾಕೆಟ್​ನಲ್ಲಿ ಸಿಂಕ್ ಸೌಂಡ್ ಅಂತ ನಮೂದಿಸಲಾಗಿದೆ. ಈ ತರಹದ ವರ್ಗೀಕರಣ ಬೇರೆ ಯಾವ ಪ್ರಶಸ್ತಿಗೂ ಇಲ್ಲ. ಬರೀ ಇದೊಂದು ಪ್ರಶಸ್ತಿಗೆ ಏಕೆ ಹಾಕಿದ್ದಾರೋ ಗೊತ್ತಾಗುತ್ತಿಲ್ಲ. ಅರ್ಜಿಯಲ್ಲೇ ಫಾರ್ ಸಿಂಕ್ ಸೌಂಡ್ ಅಂತ ಬ್ರಾಕೆಟ್​ನಲ್ಲಿ ಹಾಕಿದ್ದರೆ, ನಾವು ಟಿಕ್ ಮಾಡುತ್ತಿರಲಿಲ್ಲ. ನಾವೆಲ್ಲೂ ಇದು ಸಿಂಕ್ ಸೌಂಡ್ ಅಂತ ಹೇಳಿಲ್ಲ. ಏಕೆಂದರೆ, ಲೊಕೇಶನ್​ನಲ್ಲಿ ನೇರವಾಗಿ ಲೈವ್ ರೆಕಾರ್ಡಿಂಗ್ ಮಾಡಿಲ್ಲ. ಕೆಲವು ಭಾಗಗಳು ಮಾತ್ರ ಲೈವ್ ಆಗಿ ರೆಕಾರ್ಡ್ ಮಾಡಲಾಗಿದೆಯೇ ಹೊರತು, ಮಿಕ್ಕಂತೆ ಆ ನಂತರ ಡಬ್ ಮಾಡಿಸಿ ಅಳವಡಿಸಿದ್ದೇವೆ. ಡೊಳ್ಳು ಕುಣಿತವಾದ್ದರಿಂದ, ಆಯ್ಕೆ ಸಮಿತಿಯವರು ನೇರವಾಗಿ ಲೊಕೇಶನ್​ನಲ್ಲೇ ರೆಕಾರ್ಡ್ ಮಾಡಿರಬಹುದು ಅಂತ ಅಂದುಕೊಂಡಿರಬಹುದು. ಏಕೆಂದರೆ, ಡೊಳ್ಳು ಧ್ವನಿಯನ್ನು ಮರುಸೃಷ್ಟಿ ಮಾಡುವುದು ಅಷ್ಟು ಸುಲಭವಲ್ಲ. ಅದನ್ನು ಗಮನಿಸಿ ವಿಶೇಷವಾಗಿ ಪ್ರಶಸ್ತಿ ಕೊಟ್ಟಿರಬಹುದೇನೋ? ಹಾಗಾಗಿ, ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸಹ ಆಯ್ಕೆ ಸಮಿತಿಯಿಂದ ಸ್ಪಷ್ಟೀಕರಣಕ್ಕೆ ಕಾಯುತ್ತಿದ್ದೇನೆ’ ಎನ್ನುತ್ತಾರೆ.

ಮಿಕ್ಕಂತೆ ಕೇರಳದಿಂದ ಜೊಬಿನ್ ಜಯನ್ ಅವರನ್ನು ಕರೆಸಿ ರೆಕಾರ್ಡ್ ಮಾಡಿಸಿರುವುದು ನಿಜ ಎನ್ನುವ ಅವರು, ‘ಜೊಬಿನ್ ಸಿಂಕ್ ಸೌಂಡ್ ತಜ್ಞ. ಅವರನ್ನು ಕರೆಸಿ ಹೆಸರುಘಟ್ಟದ ಬಳಿ ಹೋಗಿ ಧ್ವನಿಯನ್ನು ಮರುಸೃಷ್ಟಿ ಮಾಡಿದ್ದೇವೆ. ಪ್ರಶಸ್ತಿ ಬಂದಿದ್ದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದೊಂದು ಬ್ರಾಕೆಟ್ ಹಾಕುವ ಅವಶ್ಯಕತೆ ಇರಲಿಲ್ಲ. ಏಕೆಂದರೆ, ಯಾವುದೇ ಪ್ರಶಸ್ತಿಗೂ ಬ್ರಾಕೆಟ್ ಇಲ್ಲ. ಈ ವಿಭಾಗಕ್ಕೆ ಮಾತ್ರ ಬ್ರಾಕೆಟ್ ಯಾಕೆ ಹಾಕಿದ್ದಾರೆ ಗೊತ್ತಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾರೆ ಸಾಗರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net