

ಬಾಲಿವುಡ್ ನಟಿ ನೋರಾ ತೇಹಿ ಅಭಿನಯದ ಜತೆಗೆ ಸುಮಾರು 20ಕ್ಕೂ ಅಧಿಕ ಸಿನಿಮಾಗಳ ವಿಶೇಷ ಹಾಡುಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸ್ಪೆಷಲ್ ಸಾಂಗ್‌ಗಳೇ ನೋರಾಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಎಂದರೆ ತಪ್ಪಾಗಲಾರದು. ಹೀಗಿರುವಾಗಲೇ, ಕನ್ನಡದ ‘ಕೆಡಿ: ದ ಡೆವಿಲ್’ ಚಿತ್ರದ ‘ಸರ್ಸೆ..’ ಹಾಡು ನಟಿಯನ್ನು ವಿವಾದಕ್ಕೆ ಗುರಿ ಮಾಡಿ, ಕ್ಷಮೆ ಕೇಳುವಂತೆ ಮಾಡಿತ್ತು. ಇದೀಗ ಆ ವಿವಾದ ಮಾಸಿದ ಬೆನ್ನಲ್ಲೇ ನೋರಾ ಬಹುನಿರೀಕ್ಷಿತ ತಮಿಳಿನ ‘ಜೈಲರ್ 2’ ಚಿತ್ರದ ವಿಶೇಷ ಹಾಡಿನಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ನಟ ರಜಿನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ ‘ಜೈಲರ್ 2’ ಇದೇ 15ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಈಗಾಗಲೇ ಪ್ರಚಾರಕ್ಕೆ ಮುಂದಾಗಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಈ ನಾಲ್ಕನೇ ಹಾಡನ್ನು ರಿವೀಲ್ ಮಾಡಿದೆ. ‘ಬಿಂದಾಸ್’ ಶೀರ್ಷಿಕೆಯ ಸ್ಪೆಷಲ್ ಸಾಂಗ್ ಇದಾಗಿದ್ದು, ನೋರಾ ತೇಹಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನೀಡುವ ಜತೆಗೆ ದೀಪ್ತಿ ಸುರೇಶ್ ಜತೆ ಧ್ವನಿಯಾಗಿದ್ದಾರೆ. ಸದ್ಯ ಈ ಹಾಡು ವೈರಲ್ ಆಗಿದೆ. ಇದೇ 5ರಂದು ‘ಜೈಲರ್ 2’ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇನ್ನು ‘ಬಿಂದಾಸ್’ ಹಾಡಿನ ಮೂಲಕ ನೋರಾ ತೇಹಿ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ತಮಿಳಿನ ‘ಕಾಂಚನಾ 4’ನಲ್ಲಿ ಪೂರ್ಣಪ್ರಮಾಣದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. -ಏಜೆನ್ಸೀಸ್