

ಬೆಂಗಳೂರು: ಕನ್ನಡದಲ್ಲಿ ಹೆಚ್ಚುಹೆಚ್ಚು ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ಬರುತ್ತಿವೆ. ಈ ಸಾಲಿಗೆ ಇದೀಗ 'ನೋಡದ ಪುಟಗಳು' ಎಂಬ ಹೊಸ ಚಿತ್ರ ಸಹ ಸೇರಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಿದೆ.
ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟ ಡಿಂಗ್ರಿ ನಾಗರಾಜ್ ಮುಂತಾದವರು ಭಾಗವಹಿಸಿದ್ದು, ಇವರೆಲ್ಲರ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ಅವರು, 'ಪ್ರತೀ ವರ್ಷ ನಿರ್ಧಿಷ್ಟ ಅವಧಿಯಲ್ಲಿ ಒಂದಿಷ್ಟು ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳನ್ನಾಧರಿಸಿ ಚಿತ್ರ ಮಾಡಿದ್ದೇವೆ. ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವೂ ಸೇರಿ ಕ್ಲೈಮ್ಯಾಕ್ಸ್ ಆಗುತ್ತದೆ. ಆದರೆ, ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತದೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ ವಸಂತ್ ಕುಮಾರ್.
'ನೋಡದ ಪುಟಗಳು' ಚಿತ್ರದಲ್ಲಿ ಪ್ರೀತಂ ಮಕ್ಕಿಹಳ್ಳಿ ಮತ್ತು ಕಾವ್ಯಾ ರಮೇಶ್ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಇದು ಎರಡನೆಯ ಅವಕಾಶ. ಮಿಕ್ಕಂತೆ ವಿಲಾಸ್ ಕುಲಕರ್ಣಿ, ಅಶೋಕ್ ರಾವ್, ಪಿ.ಬಿ. ರಾಜುನಾಯಕ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಘ್ನೇಶ್ ಮೆನನ್ ಸಂಗೀತ ಸಂಯೋಜಿಸಿದ್ದು, ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.