

ಚಿತ್ರ: ಮರ್ಫಿ
ನಿರ್ದೇಶನ: ಬಿ.ಎಸ್. ಪ್ರದೀಪ್ ವರ್ಮಾ
ತಾರಾಗಣ: ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್, ಇಳಾ ವೀರಮಲ್ಲಾ, ದತ್ತಣ್ಣ, ಮಹಾಂತೇಶ್ ಹಿರೇಮಠ, ಅಶ್ವಿನ್ ರಾವ್ ಪಲ್ಲಕ್ಕಿ ಮತ್ತಿತರರು.
ಶಿವ ಸ್ಥಾವರಮಠ
ಭೂತದಲ್ಲಿ ನಡೆದ ಘಟನೆಯನ್ನು ನಾವು ಬದಲಾಯಿಸಲು ಅಸಾಧ್ಯ. ಅಕಸ್ಮಾತ್ ಬದಲಾವಣೆ ಮಾಡಲು ನಾವೇನಾದರೂ ಹೊರಟರೆ ಅದು ಮತ್ತೊಂದು ಘಟನೆಗೆ ಕಾರಣವಾಗುತ್ತದೆ. ಇದು ಡೊಮಿನೊ ಎೆಕ್ಟ್ ಥಿಯರಿಯ ಅಂಶ. ಇದನ್ನೇ ನಿರ್ದೇಶಕ ಪ್ರದೀಪ್ ವರ್ಮಾ ಸುಂದರ ಪ್ರೇಮಕಾವ್ಯದೊಂದಿಗೆ ‘ಮರ್ಫಿ’ಯಲ್ಲಿ ನಿರೂಪಿಸಿದ್ದಾರೆ.
ಆತ ಡೇವಿಡ್ (ಪ್ರಭು ಮುಂಡ್ಕೂರ್), ತಂದೆಯನ್ನು ಕಳೆದುಕೊಂಡು ಅಜ್ಜ ರಿಚರ್ಡ್ (ದತ್ತಣ್ಣ) ಆಶ್ರಯದಲ್ಲಿ ಬೆಳೆದಿರುತ್ತಾನೆ. ಮನೆಯಲ್ಲಿರುವ ರೇಡಿಯೋ, ತಾತ ರಿಚರ್ಡ್‌ಗೆ ಅಚ್ಚುಮೆಚ್ಚು. ಯಾರಿಗೂ ಅದನ್ನು ಮುಟ್ಟಲು ಬಿಡುವುದಿಲ್ಲ. ಡೇವಿಡ್ ಮಾತ್ರ ಆ ರೇಡಿಯೋವನ್ನು ರಿಪೇರಿ ಮಾಡಿ ತಾತನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಬೇಕು ಎಂದು ಮುಂದಾಗುತ್ತಾನೆ. ಅಂತೆಯೇ ಸಾಧಿಸುತ್ತಾನೆ. ತರಂಗಗಳ ಕ್ರಾಸ್ ಕನೆಕ್ಷನ್ ಆಗಿ ರೇಡಿಯೋದಿಂದ ಒಂದು ಮಧುರ ಧ್ವನಿ ಹೊರಹೊಮ್ಮುತ್ತದೆ. ಆ ಧ್ವನಿಯೇ ಜನನಿಯದ್ದು (ರೋಶಿನಿ ಪ್ರಕಾಶ್). ಜನನಿ 1996ರ ಕಾಲದಲ್ಲಿರುತ್ತಾಳೆ. ಡೇವಿಡ್ 2024ರ ಅವಧಿಯಲ್ಲಿರುತ್ತಾನೆ. ಬಳಿಕ ಇಬ್ಬರ ಪರಿಚಯದಿಂದ ಕಥೆ ತೆರೆದುಕೊಳ್ಳುತ್ತದೆ. ಹಾಗಾದರೆ, ಮುಂದಿನ ಕಥೆ ಏನು? ಭೂತ-ಭವಿಷ್ಯಗಳ ಸಂಬಂಧವೇನು? ಎಂದು ತಿಳಿಯಬೇಕಾದರೆ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಬೇಕು.
ಥಿಯರಿ ಅಂಶವನ್ನೇ ಸುಂದರ ಪ್ರೇಮಕಾವ್ಯವನ್ನಾಗಿಸುವಲ್ಲಿ ನಿರ್ದೇಶಕ ಪ್ರದೀಪ್ ವರ್ಮಾರ ಪರಿಶ್ರಮ ಎದ್ದು ಕಾಣುತ್ತದೆ. ‘ಮರ್ಫಿ’ಯಲ್ಲಿ ಟೈಮ್ ಟ್ರಾವೆಲ್, ಲೂಯೀಸ್ ಚಾರ್ಲ್ಸ್ ಮ್ಯಾನುವಲ್ ಥಿಯರಿ, ಬಾಂಧವ್ಯ, ಪ್ರೀತಿ, ತ್ಯಾಗ ಹೀಗೆ ನಾನಾ ಅಂಶಗಳನ್ನು ಕಾಣಬಹುದು. ಮುಖ್ಯವಾಗಿ ಚಿತ್ರದ ಕಥೆಯಲ್ಲಿ ಗಟ್ಟಿತನವಿದ್ದು, ಕೊನೆಯವರೆಗೆ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಮುಂದೇನು? ಎಂಬ ಕುತೂಹಲದೊಂದಿಗೆ ಚಿತ್ರ ನೋಡಿಸಿಕೊಳ್ಳುತ್ತದೆ.
ಕಥೆಗೆ ತಕ್ಕಂತೆ ಪಾತ್ರಗಳ ಆಯ್ಕೆ ಚಿತ್ರದ ಪ್ಲಸ್ ಪಾಯಿಂಟ್. ಪ್ರತಿಯೊಬ್ಬರೂ ಪಾತ್ರದಲ್ಲಿ ಜೀವಿಸಿದ್ದಾರೆ. ಪ್ರಭು ಮುಂಡ್ಕೂರ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಕಣ್ಣಲ್ಲಿಯೇ ನಟಿಸಿದ್ದಾರೆ. ರೋಶಿನಿ ಪ್ರಕಾಶ್ ನಟನೆ, ಡೈಲಾಗ್‌ಗಳು ಗಮನಸೆಳೆಯುತ್ತವೆ. ಇಳಾ ವೀರ್ಮಲ್ಲಾ ಪ್ರಭುಗೆ ಸಾಥ್ ನೀಡಿದ್ದಾರೆ. ದತ್ತಣ್ಣ ಭಾವನಾತ್ಮಕ ನಟನೆಯಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಮಹಾಂತೇಶ್ ಹೀರೇಮಠ, ಅಶ್ವಿನ್ ರಾವ್ ಪಲ್ಲಕ್ಕಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು, ಚಿತ್ರವು ತಾಂತ್ರಿಕವಾಗಿ ಸಶಕ್ತವಾಗಿ ಮೂಡಿಬಂದಿದೆ. ಪ್ರತಿ ದೃಶ್ಯವೂ ಕಾವ್ಯದಂತೆ ಕಟ್ಟಿಕೊಟ್ಟಿದ್ದಾರೆ ಛಾಯಾಗ್ರಾಹಕ ಆದರ್ಶ್. ಅರ್ಜುನ್ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಸಂಗೀತ ಆಪ್ತವಾಗಿದೆ. ಚಿತ್ರದಲ್ಲಿ ಪ್ರದೀಪ್-ಪ್ರಭು ಸಂಭಾಷಣೆ, ಕವಿತೆಗಳು ಇಷ್ಟವಾಗುತ್ತವೆ. ಪ್ರೀತಿ, ತ್ಯಾಗ ಹಾಗೂ ಬಾಂಧವ್ಯದ ‘ಮರ್ಫಿ’ ಕಂಟೆಂಟ್ ಪ್ರಿಯ ಸಿನಿಮಾ ವೀಕ್ಷಕರಿಗೆ ಖಂಡಿತವಾಗಿ ಇಷ್ಟವಾಗುತ್ತದೆ.