ಚಂದನದಲ್ಲಿ ಗಾನ ಚಂದನ

manohar v
Published on

ಕಿರುತೆರೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ರಿಯಾಲಿಟಿ ಶೋಗಳು ಖ್ಯಾತಿ ಗಿಟ್ಟಿಸಿಕೊಂಡಿವೆ. ಅಂಥದ್ದೇ ರಿಯಾಲಿಟಿ ಶೋವೊಂದು ಚಂದನ ವಾಹಿನಿಯಲ್ಲೂ ಪ್ರಸಾರವಾಗಲಿದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಮತ್ತು ಗಾಯಕಿ ಬಿ.ಆರ್. ಛಾಯಾ ಸಾರಥ್ಯದಲ್ಲಿ ‘ಗಾನ ಚಂದನ’ ಸಂಗೀತ ರಿಯಾಲಿಟಿ ಶೋ ಮಾರ್ಚ್ 5ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 7.30ರಿಂದ 8.15ರವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗಾಯಕಿ ಛಾಯಾ, ‘ಬೇರೆ ವಾಹಿನಿಗಳಂತೆ, ಇಲ್ಲಿ ಅಬ್ಬರ ಆಡಂಬರ ಇರುವುದಿಲ್ಲ. ಎಲ್ಲವೂ ಸರಳವಾಗಿ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಇಬ್ಬರನ್ನು ಆಯ್ದುಕೊಳ್ಳುವ ಬಗ್ಗೆ ಮೊದಲು ಪ್ಲಾ್ಯನ್ ಮಾಡಲಾಗಿತ್ತು. ಬಳಿಕ ಚೆನ್ನಾಗಿ ಹಾಡಿದ್ದರಿಂದ ಒಂದೊಂದು ಜಿಲ್ಲೆಯಿಂದ ಮೂವರು, ನಾಲ್ವರನ್ನೂ ಆಯ್ಕೆ ಮಾಡಲಾಯಿತು. ಕೊನೆಗೆ ರಾಜ್ಯಾದ್ಯಂತ ಒಟ್ಟು 490 ಗಾಯಕರನ್ನು ಪಟ್ಟಿ ಮಾಡಿ, ಅದರಲ್ಲಿ 79 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಸ್ಪರ್ಧೆಯ ಜತೆಗೆ ಹಾಡುವ ರೀತಿ ಮತ್ತು ಗಾಯನದ ಪ್ರಮುಖಾಂಶಗಳನ್ನೂ ‘ಗಾನ ಚಂದನ’ದಲ್ಲಿ ಹೇಳಿಕೊಡಲಾಗುತ್ತದೆಯಂತೆ. ಪರಸ್ಪರ ಗಾಯಕರೊಂದಿಗೆ ಆತ್ಮಾವಲೋಕನ ಅವಕಾಶವನ್ನೂ ಇಲ್ಲಿ ಒದಗಿಸಲಾಗುತ್ತಿದೆ. ತೀರ್ಪಗಾರರ ಅಂಕದ ಜತೆಗೆ ಸ್ಪರ್ಧೆಯಲ್ಲಿರುವವರು ಪರಸ್ಪರ ಅವರವರ ಗಾಯನಕ್ಕೆ ತಕ್ಕಂತೆ ಅಂಕಗಳನ್ನು ನೀಡುವ ಪರಿಪಾಠ ಅಳವಡಿಸಲಾಗಿದೆ. ‘18 ರಿಂದ 35 ವರ್ಷದೊಳಗಿನ ಗಾಯಕರು ಗಾನ ಚಂದನದಲ್ಲಿ ಭಾಗವಹಿಸುತ್ತಿದ್ದಾರೆ. ನಾಲ್ಕು ತಿಂಗಳ ಈ ಕಾರ್ಯಕ್ರಮದಲ್ಲಿ 79 ಗಾಯಕರು ಭಾಗವಹಿಸಲಿದ್ದಾರೆ. ಕೊನೆಗೆ ವಿಜೇತರಾದವರಿಗೆ ಒಂದು ಲಕ್ಷ ರೂ. ಬಹುಮಾನ ರೂಪದಲ್ಲಿ ನೀಡಲಾಗುವುದು’ ಎಂದು ಮಾಹಿತಿ ನೀಡುತ್ತಾರೆ ಕಾರ್ಯಕ್ರಮದ ನಿರ್ದೇಶಕ ಪದ್ಮಪಾಣಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net