20 ವರ್ಷಗಳ ದಾಂಪತ್ಯಕ್ಕೆ ಮತ್ತೊಂದು ಸುಂದರ ಅಧ್ಯಾಯ: ಮತ್ತೆ ಮದುವೆಯಾದ ಸೂರ್ಯ–ಜ್ಯೋತಿಕಾ! ‘ದಿ ಸೀಕ್ವೆಲ್’ ವಿಡಿಯೋ ವೈರಲ್​! Suriya and Jyothika

ಸೂರ್ಯ-ಜ್ಯೋತಿಕಾ ಮದುವೆಯ 20ನೇ ವಾರ್ಷಿಕೋತ್ಸವದ ವೈರಲ್ ವಿಡಿಯೋ
ಸೂರ್ಯ-ಜ್ಯೋತಿಕಾ ಮದುವೆಯ 20ನೇ ವಾರ್ಷಿಕೋತ್ಸವದ ವೈರಲ್ ವಿಡಿಯೋ
Published on
ಚೆನ್ನೈ: ದಕ್ಷಿಣ ಭಾರತದ ಮೋಸ್ಟ್ ಲವ್ಡ್ ಕಪಲ್ ಎಂದೇ ಕರೆಸಿಕೊಳ್ಳುವ ನಟ ಸೂರ್ಯ ಮತ್ತು ಜ್ಯೋತಿಕಾ (Suriya and Jyothika) ತಮ್ಮ ದಾಂಪತ್ಯ ಜೀವನದ ಮತ್ತೊಂದು ಸುಂದರ ಮೈಲಿಗಲ್ಲು ತಲುಪಿದ್ದಾರೆ. 
ಮದುವೆಯಾಗಿ 20 ವರ್ಷಗಳು ಕಳೆದರೂ ಇವರ ನಡುವಿನ ಪ್ರೀತಿ ಸ್ವಲ್ಪವೂ ಕರಗಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ, ಈ ಸ್ಟಾರ್ ದಂಪತಿಗಳು ಕುಟುಂಬ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹ ಪ್ರಮಾಣ ವಚನ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಮದುವೆಯ ಸುಂದರ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದ್ದು, ಇದನ್ನು ನೋಡಿರುವ ಫ್ಯಾನ್ಸ್ ಫಿದಾ ಆಗಿದ್ದಾರೆ.

'ದಿ ಸೀಕ್ವೆಲ್' - ಅಪೂರ್ಣತೆಗಳೇ ನಮ್ಮ ಬಾಂಧವ್ಯದ ಅಂದ!

ಈ ವಿಶೇಷ ಸಮಾರಂಭದ ಬಗ್ಗೆ ಸೂರ್ಯ ಮತ್ತು ಜ್ಯೋತಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸುದೀರ್ಘವಾದ ಹಾಗೂ ಮನ ಮುಟ್ಟುವ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ "ದಿ ಸೀಕ್ವೆಲ್" (ಮುಂದುವರಿದ ಭಾಗ) ಎಂದು ಹೆಸರಿಟ್ಟಿದ್ದಾರೆ.
ಇದು ಪರಿಪೂರ್ಣ ದಾಂಪತ್ಯವನ್ನು ಆಚರಿಸುವುದಕ್ಕಲ್ಲ; ಬದಲಿಗೆ ವರ್ಷಗಳ ಕಾಲ ತಾವು ಕಟ್ಟಿಕೊಂಡಿರುವ ಬಾಂಧವ್ಯವನ್ನು ಸಂಭ್ರಮಿಸುವುದಕ್ಕಾಗಿ. ಇದು ನಮ್ಮ 20 ವರ್ಷಗಳ ಪ್ರೀತಿ, ಜಗಳ ಮತ್ತು ಏರಿಳಿತಗಳ ಸಂಭ್ರಮವಾಗಿದೆ. ನಮ್ಮ ಅಪೂರ್ಣತೆಗಳು, ಹೊಂದಾಣಿಕೆಗಳು, ಪರಸ್ಪರ ತಿಳುವಳಿಕೆ ಮತ್ತು ನಿಸ್ವಾರ್ಥ ಪ್ರೀತಿಯ ಆಚರಣೆ ಇದಾಗಿದೆ ಎಂದಿದ್ದಾರೆ. 
ನಾವು ಪರಸ್ಪರರಿಗಾಗಿ ಹೇಗೆ ಬದಲಾಗಿದ್ದೇವೆ ಮತ್ತು ಬೆಳೆದಿದ್ದೇವೆ ಎಂಬುದನ್ನು ಸಂಭ್ರಮಿಸುತ್ತಿದ್ದೇವೆ ಎಂದು ದಂಪತಿಗಳು ತಮ್ಮ ಮನಸ್ಸಿನ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಜ್ಯೋತಿಕಾ ಭಾವುಕ ಪ್ರತಿಜ್ಞೆ!

ಸಮಾರಂಭದಲ್ಲಿ ಜ್ಯೋತಿಕಾ ತಮ್ಮ ಪತಿ ಸೂರ್ಯ ಮತ್ತು ಮಕ್ಕಳ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ವಾಸ್ತವದಿಂದ ದೂರವೆಂದು ಭಾವಿಸಿದ್ದ ಕನಸೊಂದು ಈಗ ನನಸಾಗಿದೆ. ನಾನು ಸಂತೋಷವಾಗಿರಲು ಪ್ರತಿಜ್ಞೆ ಮಾಡುತ್ತೇನೆ, ಏಕೆಂದರೆ ಜೀವನದ ಸಕಾರಾತ್ಮಕ ಅಂಶಗಳನ್ನು ಮಾತ್ರ ನೋಡಲು ನಾನು ಬಯಸುತ್ತೇನೆ. ನನ್ನ ಜೀವನಕ್ಕೆ ಅರ್ಥ ಹಾಗೂ ಬದುಕಲು ಕಾರಣವನ್ನು ನೀಡಿದ ನನ್ನ ಸುಂದರ ಮಕ್ಕಳು ಮತ್ತು ಪ್ರತಿದಿನ ಬೆಳಿಗ್ಗೆ ನನ್ನನ್ನು ರಕ್ಷಿಸುವ ತೋಳುಗಳಲ್ಲಿ ಎಚ್ಚರಗೊಳ್ಳುವ ಭಾಗ್ಯಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ, ಅತ್ಯಂತ ಸುಂದರವಾದ ಇಟ್ಟಿಗೆಯ ಮನೆಗಳಲ್ಲೂ ಸೋರಿಕೆ ಮತ್ತು ನವೀಕರಣದ ಅಗತ್ಯತೆಗಳು ಇದ್ದೇ ಇರುತ್ತವೆ. ನಮ್ಮ ಸುತ್ತಲಿನ ಪರಿಸರವನ್ನು ನೋಡಿದಾಗ, ಅಸ್ತಿತ್ವದಲ್ಲಿರುವ ಪ್ರತಿಯೊಂದೂ ಅಪೂರ್ಣವಾಗಿದೆ; ಆ ಕೊರತೆಗಳನ್ನು ನಾವು ಹೇಗೆ ತುಂಬಿಕೊಳ್ಳುತ್ತೇವೆ ಎಂಬುದೇ ಮುಖ್ಯ ಎಂದು ಅವರು ಬರೆದಿರುವ ಸಾಲುಗಳು ಪ್ರತಿಯೊಬ್ಬರ ಹೃದಯವನ್ನು ತಲುಪಿದೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net