ಚೆನ್ನೈ: ತಮಿಳುನಾಡಿನ ರಾಜಕೀಯ ಮಾತ್ರವಲ್ಲದೇ, ಸಿನಿಮಾ ರಂಗದಲ್ಲೂ ಸದ್ಯ ಭಾರಿ ಚರ್ಚೆಯಲ್ಲಿರುವ ಹೆಸರು ನಟ ಹಾಗೂ ಸಿಎಂ ಸಿ. ಜೋಸೆಫ್ ವಿಜಯ್. ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇಲ್ಲಿಯವರೆಗೆ ಯಾವುದೇ ಗಣ್ಯ ವ್ಯಕ್ತಿಗಳ ಮದುವೆ, ಸಮಾರಂಭ ಮತ್ತು ಇತರೆ ಖಾಸಗಿ ಕಾರ್ಯಕ್ರಮಗಳಿಗೆ ವಿಜಯ್ ಮತ್ತು ಅವರ ಗೆಳತಿ, ನಟಿ ತ್ರಿಷಾ ಕೃಷ್ಣನ್ ಜತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಇದು ಅವರಿಬ್ಬರ ನಡುವೆ ಏನೋ ಸಂಬಂಧವಿದೆ ಎಂಬ ಊಹಾಪೋಹಗಳಿಗೆ ಪ್ರತಿಬಾರಿಯೂ ಪುಷ್ಟಿ ನೀಡುತ್ತಿದೆ. ಆದರೀಗ, ಪತ್ನಿ ಸಂಗೀತಾ ಅವರೊಂದಿಗೆ ಡಿವೋರ್ಸ್ ವಿವಾದವನ್ನು ಬಗೆಹರಿಸಿಕೊಂಡ ಬಳಿಕ ವಿಜಯ್ ಮತ್ತು ಸಂಗೀತಾ ಸೊರ್ನಲಿಂಗಂ ಜೋಡಿ ಒಂದೇ ಸಮಾರಂಭದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದ್ರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಆರತಕ್ಷತೆ ಸಮಾರಂಭಕ್ಕೆ ಇಬ್ಬರೂ ಆಗಮಿಸದೆ ಆದರೂ ಒಟ್ಟಿಗೆ ಭೇಟಿ ಕೊಡದಿರುವುದು ಈಗ ಮತ್ತಷ್ಟು ಚರ್ಚೆಗಳಿಗೆ, ಊಹಾಪೋಗಳಿಗೆ ಕಾರಣವಾಗಿದೆ. ಅತ್ತ, ಸದಾ ವಿಜಯ್ ಜತೆ ಕಾಣಿಸಿಕೊಳ್ಳುತ್ತಿದ್ದ ತ್ರಿಷಾ ಕೂಡ ಸಂಗೀತಾ ಎಂಟ್ರಿಯ ಬೆನ್ನಲ್ಲೇ ಸಮಾರಂಭಕ್ಕೆ ಹಾಜರಾಗದಿರುವುದು ಸದ್ಯ ಒಂದಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಡಿವೋರ್ಸ್ ವಿವಾದ ಕೋರ್ಟ್ ಮೆಟ್ಟಿಲಿಗೆ ಹೋದಾಗಿನಿಂದಲೂ ವಿಜಯ್ ಮತ್ತು ಸಂಗೀತಾ ವಿಚಾರವಾಗಿ ಎಲ್ಲಿಯೂ ಸುದ್ದಿ ಇರಲಿಲ್ಲ. ಆದರೆ, ಈ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಕೆಲವರಿಗೆ ಖುಷಿ ತಂದಿದ್ದೇ ಆದರೂ ಯಾವ ಕಾರಣಕ್ಕೆ ಇಬ್ಬರೂ ಪ್ರತ್ಯೇಕವಾಗಿ ಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಇಲ್ಲ-ಸಲ್ಲದ ವಿಚಾರಗಳನ್ನು ಸೃಷ್ಟಿಸಿವೆ. ಈ ಹಿಂದೆ, ಪುತ್ರ ಜೇಸನ್ ಸಂಜಯ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಬಿಡುಗಡೆ ಸಂದರ್ಭದಲ್ಲಿ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದ ಸಂಗೀತಾ, ಇದೀಗ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಇತ್ತ ವಿಜಯ್ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಒಬ್ಬರೇ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ವೇದಿಕೆಗೆ ತೆರಳಿದ ಅವರು ನವದಂಪತಿಗಳಾದ ಅನಿರುದ್ಧ್ ಮತ್ತು ಕಾವ್ಯಾ ಅವರಿಗೆ ಶುಭಾಶಯ ಕೋರಿದ್ದು, ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದೆಲ್ಲ ಒಂದೆಡೆಯಾದರೆ, ಅತ್ತ ನಟಿ ತ್ರಿಷಾ ಎಂಟ್ರಿ ಕೊಡದಿರುವುದು ಗೊಂದಲ, ಅನುಮಾನಗಳನ್ನು ಹುಟ್ಟುಹಾಕಿವೆ.
ವಿಜಯ್ ಮತ್ತು ಸಂಗೀತಾ ಜೋಡಿ 1999ರ ಆಗಸ್ಟ್‌ನಲ್ಲಿ ವಿವಾಹವಾಗಿದ್ದು, ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ವೈಯಕ್ತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ರಾಜಕೀಯ ಕಾರ್ಯಕ್ರಮಗಳು ಮತ್ತು ಸಿನಿಮಾ ಸಮಾರಂಭಗಳಲ್ಲಿಯೂ ಸಂಗೀತಾ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ಈ ವರ್ಷದ ಆರಂಭದಲ್ಲಿ ಸಂಗೀತಾ ಕೋರ್ಟ್ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದುವೇ ವಿಜಯ್ ಅವರು ಚುನಾವಣೆಗೆ ನಿಂತಿದ್ದ ಸಂದರ್ಭದಲ್ಲೇ ಆಗಿದ್ದು ಕೋಲಾಹಲಕ್ಕೆ ಕಾರಣವಾಯಿತು. ನಟಿಯೊಬ್ಬರೊಂದಿಗೆ ವಿಜಯ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಮತ್ತು ತಮ್ಮ ವಿರೋಧದ ನಡುವೆಯೂ ಆ ಸಂಬಂಧ ಮುಂದುವರಿಸಿದ್ದರಿಂದ ತೀವ್ರ ಮಾನಸಿಕ ನೋವು ಅನುಭವಿಸಿರುವುದಾಗಿ ಅರ್ಜಿಯಲ್ಲಿ ಆರೋಪಿಸಿದ್ದರು.
ನ್ಯಾಯಾಲಯದಲ್ಲಿ ಕೆಲವು ವಿಚಾರಣೆಗಳು ನಡೆದ ಬಳಿಕ ಕುಟುಂಬಸ್ಥರ ಮಧ್ಯಸ್ಥಿಕೆಯಿಂದ ಸಂಗೀತಾ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ ಅರ್ಜಿ ಹಿಂಪಡೆದ ನಂತರವೂ ವಿಜಯ್ ಮತ್ತು ಸಂಗೀತಾ ಒಂದೇ ಸಮಾರಂಭದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).