ಸಂಗೀತ ಲೋಕದ ಮಾಂತ್ರಿಕನ ಮನಗೆದ್ದ ಚೆನ್ನೈನ ಪುಟ್ಟ ಹೋಟೆಲ್: ಇಲ್ಲಿನ ಆಂಧ್ರ ಊಟಕ್ಕೆ ಅನಿರುದ್ಧ್ ಫಿದಾ! Anirudh Ravichander

ಅನಿರುದ್ಧ್ ತಮ್ಮ ನೆಚ್ಚಿನ ಆಹಾರ ಮತ್ತು ಆಗಾಗ ಭೇಟಿ ನೀಡುವ ರೆಸ್ಟೋರೆಂಟ್ ಬಗ್ಗೆ ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದಾರೆ.36 ವರ್ಷದ ಅನಿರುದ್ಧ್ ಸಸ್ಯಾಹಾರಿ. ಅದರಲ್ಲೂ ಖಾರವಾದ ಆಂಧ್ರ ಶೈಲಿಯ ಊಟವೆಂದರೆ ಅವರಿಗೆ ಎಲ್ಲಿಲ್ಲದ ಇಷ್ಟವಂತೆ. ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ರೆಸ್ಟೋರೆಂಟ್ ಹೆಸರನ್ನೂ ಬಹಿರಂಗಪಡಿಸಿದ್ದಾರೆ.Anirudh Ravichander
ಆಂಧ್ರ ಊಟಕ್ಕೆ ಅನಿರುದ್ಧ್ ಫಿದಾ
ಆಂಧ್ರ ಊಟಕ್ಕೆ ಅನಿರುದ್ಧ್ ಫಿದಾWEB
Published on: 

ಚೆನ್ನೈ: ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರ ವಿವಾಹದ ಸಂಭ್ರಮದ ನಡುವೆ ಇದೀಗ ಅನಿರುದ್ಧ್ ಅವರ ಆಹಾರ ಪ್ರೀತಿಯ ವಿಚಾರವೂ ಗಮನ ಸೆಳೆಯುತ್ತಿದೆ. ನವೆಂಬರ್ 11ರಂದು ಗ್ರೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಇದರ ನಡುವೆ ಅನಿರುದ್ಧ್ ತಮ್ಮ ನೆಚ್ಚಿನ ಆಹಾರ ಮತ್ತು ಆಗಾಗ ಭೇಟಿ ನೀಡುವ ರೆಸ್ಟೋರೆಂಟ್ ಬಗ್ಗೆ ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದಾರೆ.36 ವರ್ಷದ ಅನಿರುದ್ಧ್ ಸಸ್ಯಾಹಾರಿ. ಅದರಲ್ಲೂ ಖಾರವಾದ ಆಂಧ್ರ ಶೈಲಿಯ ಊಟವೆಂದರೆ ಅವರಿಗೆ ಎಲ್ಲಿಲ್ಲದ ಇಷ್ಟವಂತೆ. ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ರೆಸ್ಟೋರೆಂಟ್ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಅನಿರುದ್ಧ್ ನೆಚ್ಚಿನ ಹೋಟೆಲ್ ಯಾವುದು?

ಮ್ಯಾಶಬಲ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ, ಎಲ್ಲರೂ ಒಮ್ಮೆಯಾದರೂ ಭೇಟಿ ನೀಡಬೇಕಾದ ರೆಸ್ಟೋರೆಂಟ್‌ಗಳ ಬಗ್ಗೆ ಅನಿರುದ್ಧ್ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಅವರು ಚೆನ್ನೈನ ನ್ಯಾಷನಲ್ ಲಾಡ್ಜ್ ಹೆಸರನ್ನು ಸೂಚಿಸಿದ್ದಾರೆ. ಇದು ಬಹಳ ಹಳೆಯ ರೆಸ್ಟೋರೆಂಟ್. ಆದರೂ ಇಂದಿಗೂ ಗ್ರಾಹಕರಿಂದ ತುಂಬಿರುತ್ತದೆ. ಇದು ನನ್ನ ನೆಚ್ಚಿನ ಸ್ಥಳ. ಇಲ್ಲಿನ ಖಾರವಾದ ಆಂಧ್ರ ಊಟವನ್ನು ಒಮ್ಮೆ ಸವಿಯಲೇಬೇಕು ಎಂದು ಅನಿರುದ್ಧ್ ಹೇಳಿದ್ದಾರೆ.

ಚೆನ್ನೈನ ಜಾರ್ಜ್‌ಟೌನ್ ಪ್ರದೇಶದ ಗೋವಿಂದಪ್ಪ ನಾಯ್ಕನ್ ಸ್ಟ್ರೀಟ್‌ನಲ್ಲಿರುವ ನ್ಯಾಷನಲ್ ಲಾಡ್ಜ್ 1952ರಿಂದ ಆಂಧ್ರ ಶೈಲಿಯ ಸಸ್ಯಾಹಾರಿ ಊಟವನ್ನು ಉಣಬಡಿಸುತ್ತಿದೆ. ಕೋಟಾ ಎಹಿರಾಜುಲು ಎಂಬುವವರು ಈ ಹೋಟೆಲ್ ಆರಂಭಿಸಿದ್ದರು. ಹಲವು ದಶಕಗಳು ಕಳೆದರೂ ತನ್ನ ಹಳೆಯ ಕಾಲದ ಸೊಗಡನ್ನು ಉಳಿಸಿಕೊಂಡಿರುವ ಈ ಹೋಟೆಲ್ ಇಂದಿಗೂ ಆಹಾರ ಪ್ರಿಯರನ್ನು ಸೆಳೆಯುತ್ತಿದೆ.

ಇಲ್ಲಿನ ಊಟದ ವಿಶೇಷತೆ ಏನು?

ನ್ಯಾಷನಲ್ ಲಾಡ್ಜ್‌ನ ಪ್ರಮುಖ ಆಕರ್ಷಣೆಯೇ ಸಾಂಪ್ರದಾಯಿಕ ಆಂಧ್ರ ಶೈಲಿಯ ಊಟ. ಅನ್ನದ ಜೊತೆಗೆ ವಿವಿಧ ಬಗೆಯ ತರಕಾರಿ ಪಲ್ಯ, ಪಪ್ಪು, ಚಟ್ನಿ, ರಾಯಿತಾ ಮತ್ತು ಅಪ್ಪಳಂ ಸೇರಿದಂತೆ ಹಲವು ಖಾದ್ಯಗಳನ್ನು ಇಲ್ಲಿ ನೀಡಲಾಗುತ್ತದೆ. ಇಲ್ಲಿನ ವಿಶೇಷ ತಿನಿಸುಗಳಲ್ಲಿ ಪರಪ್ಪು ಪೊಡಿ ಅಥವಾ ಗನ್‌ಪೌಡರ್ ಕೂಡ ಒಂದು. ಬೇಳೆ ಮತ್ತು ಮಸಾಲೆ ಪದಾರ್ಥಗಳಿಂದ ತಯಾರಿಸುವ ಈ ಪುಡಿಯನ್ನು ತುಪ್ಪದೊಂದಿಗೆ ಅನ್ನಕ್ಕೆ ಬೆರೆಸಿ ತಿನ್ನಲಾಗುತ್ತದೆ. ಇದರ ಜೊತೆಗೆ ರಸಂ, ಪುಳಿಸು, ಮೊಸರನ್ನ ಸೇರಿದಂತೆ ಹಲವು ಖಾದ್ಯಗಳಿರುತ್ತವೆ. ಊಟದ ಕೊನೆಯಲ್ಲಿ ನೀಡುವ ಖಾರವಾದ ಹುರಿದ ಮೆಣಸಿನಕಾಯಿ ಕೂಡ ವಿಶೇಷ ಆಕರ್ಷಣೆ.

ಇದನ್ನೂ ಓದಿ : 'ಮೇಡ್​ ಇನ್ ಕೊರಿಯಾ' ಪ್ರಿಯಾಂಕಾ ಮೋಹನ್

ಆಂಧ್ರ ಊಟ ಇಷ್ಟೊಂದು ಖಾರವಾಗಿರುವುದೇಕೆ?

ಆಂಧ್ರಪ್ರದೇಶದ ಆಹಾರ ಪದ್ಧತಿ ಎಂದರೆ ನೆನಪಾಗುವುದೇ ಖಾರ ಮತ್ತು ವಿಭಿನ್ನ ರುಚಿ. ಕೆಂಪು ಮೆಣಸಿನಕಾಯಿ, ಅದರಲ್ಲೂ ಗುಂಟೂರು ಮೆಣಸಿನಕಾಯಿ ಬಳಕೆ ಈ ಖಾರದ ರುಚಿಗೆ ಪ್ರಮುಖ ಕಾರಣ. ಹುಣಸೆಹಣ್ಣಿನ ಹುಳಿ ಮತ್ತು ಮಸಾಲೆಗಳ ಸಂಯೋಜನೆ ಆಹಾರಕ್ಕೆ ವಿಶಿಷ್ಟ ರುಚಿ ನೀಡುತ್ತದೆ.

ಆಂಧ್ರದ ಜನಪ್ರಿಯ ಸಸ್ಯಾಹಾರಿ ಖಾದ್ಯಗಳಲ್ಲಿ ಪೆಸರಟ್ಟು, ಗುಟ್ಟಿ ವಂಕಾಯ ಕೂರ ಮತ್ತು ಗೊಂಗೂರ ಪಚಡಿ ಪ್ರಮುಖವಾಗಿವೆ. ಹಸಿರು ಹೆಸರುಕಾಳಿನಿಂದ ತಯಾರಿಸುವ ದೋಸೆಯೇ ಪೆಸರಟ್ಟು. ಮಸಾಲೆ ತುಂಬಿದ ಬದನೆಕಾಯಿ ಪಲ್ಯಕ್ಕೆ ಗುಟ್ಟಿ ವಂಕಾಯ ಕೂರ ಎಂದು ಕರೆಯಲಾಗುತ್ತದೆ. ಗೊಂಗೂರ ಸೊಪ್ಪಿನಿಂದ ತಯಾರಿಸುವ ಹುಳಿ-ಖಾರದ ಚಟ್ನಿಯೇ ಗೊಂಗೂರ ಪಚಡಿ.

ಅನಿರುದ್ಧ್ ಅವರ ನೆಚ್ಚಿನ ಆಹಾರದ ಆಯ್ಕೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಂಗೀತದಷ್ಟೇ ಆಹಾರದ ವಿಚಾರದಲ್ಲೂ ತಮ್ಮದೇ ಆದ ಅಭಿರುಚಿ ಹೊಂದಿರುವ ಈ ಸಂಗೀತ ನಿರ್ದೇಶಕರಿಗೆ ಖಾರವಾದ ಆಂಧ್ರ ಊಟವೇ ಅಚ್ಚುಮೆಚ್ಚು ಎಂಬುದು ವಿಶೇಷ.