

Sharvari Wagh Interview -
ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ಮೊಮ್ಮಗಳಾಗಿದ್ದರೂ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯಿದ್ದರೂ ಸಹಾಯಕ ನಿರ್ದೇಶಕಿಯಾಗಿ ಚಿತ್ರರಂಗದ ಅ, ಆ, ಇ, ಈ ಕಲಿತವರು ಬಾಲಿವುಡ್ ನಟಿ ಶಾರ್ವರಿ ವಾಘ್. 2021ರಲ್ಲಿ "ಬಂಟಿ ಔರ್ ಬಬ್ಲಿ 2' ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಅವರು ನಂತರ "ಮುಂಜ್ಯಾ', "ವೇದಾ' ಚಿತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಅದಾಗಲೇ "ಮೈ ವಾಪಸ್ ಆವೂಂಗಾ', "ಆಲ್ಫಾ' ಸಿನಿಮಾಗಳಲ್ಲಿ ಮಿಂಚಿರುವ ಅವರು ಶುಕ್ರವಾರ (ನ. 27) ತೆರೆಗೆ ಬರಲಿರುವ "ಯೇ ಪ್ರೇಮ್ ಮೋಲ್ ಲಿಯಾ' ಮೂಲಕ ಹ್ಯಾಟ್ರಿಕ್ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಶಾರ್ವರಿ, "ನಾನು ನಿರ್ದೇಶಕ ಸೂರಜ್ ರ್ಬಜಾತಿಯಾ ಸಿನಿಮಾಗಳ ದೊಡ್ಡ ಅಭಿಮಾನಿ. ನಾನು ಅವರ ಚಿತ್ರದಲ್ಲಿ ನಟಿಸಿದ್ದೇನೆ ಅಂತ ಈಗಲೂ ನಂಬಿಕೆ ಬರುತ್ತಿಲ್ಲ. ಬಾಲಿವುಡ್ನ ಬಹುತೇಕ ನಟ, ನಟಿಯರಂತೆ ಅವರ ಸಿನಿಮಾಗಳಲ್ಲಿ ನಟಿಸಬೇಕು ಅಂತ ನನಗೂ ಆಸೆ ಇತ್ತು. ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ ಅಂತ ವಿಷಯ ತಿಳಿದ ಕೂಡಲೇ ಎಲ್ಲರಂತೆ ನಾನೂ ಅವರನ್ನು ಸಂಪರ್ಕಿಸಿದೆ. ದೇವರ ದಯೆ, ನನ್ನ ಅದೃಷ್ಟ ಸೂರಜ್ ಸರ್ "ಪೂರ್ವ' ಪಾತ್ರವನ್ನು ನನ್ನಲ್ಲಿ ಕಂಡರು, ಆಯ್ಕೆಯಾದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.
"ಪ್ರತಿ ಚಿತ್ರಕ್ಕೂ, ಪಾತ್ರಕ್ಕೂ ಅದರದೇ ಆದ ಸಿದ್ಧತೆ ಬೇಕಾಗುತ್ತದೆ' ಎನ್ನುವ ಶಾರ್ವರಿ, "ನಾನು ಮತ್ತು ಸೂರಜ್ ಸರ್ ಸನ್ನಿವೇಶಗಳು, ಭಾವನೆ ಸೇರಿ ಕಥೆ, ಪಾತ್ರದ ಬಗ್ಗೆ ತಾಸುಗಟ್ಟಲೆ ಮಾತನಾಡುತ್ತಿದ್ದೆವು. ಅವರ ಪ್ರಕಾರ ಕಲಾವಿದರು ಸಂದೇಹ ಇರಬಾರದು. ಪಾತ್ರ ಅರ್ಥವಾಗಿರಬೇಕು, ಅವರು ಭಾವನೆಗಳನ್ನು ಅನುಭವಿಸಬೇಕು ಅಂತ ಇಚ್ಛಿಸುವವರು. ಅದೇ ಒಂದು ರೀತಿ ಸರಳ ಮತ್ತು ಪರಿಣಾಮಕಾರಿ ಸಿದ್ಧತೆ. ನಾನಿಲ್ಲಿ ಕೆಲಸ ಮಾಡುವ ಮುಂಬೈ ಹುಡುಗಿ ಪೂರ್ವ ಪಾತ್ರದಲ್ಲಿ ನಟಿಸಿದ್ದೇನೆ. ಆಕೆಯ ಕುಟುಂಬದಲ್ಲಿ ಇರುವ ಆರು ಜನ ಮಹಿಳೆಯರೇ ಆಗಿರುತ್ತಾರೆ. ಕೊನೆಗೆ ತಾನು ಪ್ರೀತಿಸುವ ಹುಡುಗ ಮತ್ತು ಕುಟುಂಬ ಎರಡರ ನಡುವೆ ಸಂದಿಗ್ಧತೆಯಲ್ಲಿ ಸಿಲುಕಿಕೊಳ್ಳುವ ಹುಡುಗಿ' ಎಂದು ಮಾಹಿತಿ ನೀಡುತ್ತಾರೆ.
ನಾಯಕ ನಟ ಆಯುಷ್ಮಾನ್ ಖುರಾನಾ ಬಗ್ಗೆ, "ಅವರು ತೆರೆಯ ಹಿಂದೆ, ತೆರೆಯ ಮುಂದೆ ಪೆರ್ಕ್ಟ್ ಗ್ರೀನ್ ಫ್ಲ್ಯಾಗ್' ಎಂದು ಹೊಗಳುವ ಶಾರ್ವರಿ, "ಅವರಷ್ಟು ಚೆನ್ನಾಗಿ ಪ್ರೇಮ್ ಪಾತ್ರ ಬೇರೆಯವರಿಂದ ಮಾಡಲು ಆಗುತ್ತಿರಲಿಲ್ಲ. ನಗುತ್ತಾ, ನಗಿಸುತ್ತಾ, ಸಂಗೀತ, ಆಲೋಚನೆ, ಊಟ-ತಿಂಡಿ ಎಲ್ಲವನ್ನೂ ಹಂಚಿಕೊಳ್ಳುತ್ತಾ, ಎಲ್ಲರನ್ನೂ ಪ್ರೀತಿಯಿಂದ ನೋಡುವ ಸ್ಪೂರ್ತಿದಾಯಕ ವ್ಯಕ್ತಿ. ಪ್ರೇಕ್ಷಕಿಯಾಗಿ ನಾನೂ ಅವರ ಅಭಿಮಾನಿ. ವಿಭಿನ್ನ ಕಥೆಗಳು, ಪಾತ್ರಗಳಲ್ಲಿ ನಟಿಸಿದ್ದಾರೆ. ಅವರಿದ್ದಾರೆ ಅಂದ ತಕ್ಷಣ ಆ ಚಿತ್ರದಲ್ಲೇನೋ ಹೊಸತನವಿದೆ ಅಂತ ಜನ ನಿರ್ಧರಿಸಬಹುದು' ಎನ್ನುತ್ತಾರೆ.
ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಶಾರ್ವರಿ, "ನನಗೆ ಕಥೆಯೇ ಮುಖ್ಯ. ನಟಿಯಾಗಿ ಸವಾಲಿಲ್ಲದಿದ್ದರೆ ನಾನು ಬೋರ್ ಆಗಿಬಿಡುತ್ತೇನೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗಿರಲು ನನಗೆ ಇಷ್ಟವಿಲ್ಲ. ಹೀಗಾಗಿಯೇ ವಿಭಿನ್ನ ಜಾನರ್ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಹಾಗೇ ಒಂದು ಸಿನಿಮಾ ಒಪ್ಪಿದ ಬಳಿಕ, ಅದು ಮುಗಿಯುವವರೆಗೂ ಮನೆಯಲ್ಲಿರಲಿ, ಸೆಟ್ನಲ್ಲಿರಲಿ ಪಾತ್ರದ ಬಗ್ಗೆ ಹೊಸದಾಗಿ ಏನಾದರೂ ಮಾಡಬಹುದಾ ಅಂತ ಯೋಚಿಸುತ್ತಿರುತ್ತೇನೆ. ಸಿನಿಮಾ ಬಿಟ್ಟು ನನಗೆ ಬೇರೇನೂ ಗೊತ್ತಿಲ್ಲ. ಬೇರೆ ಏನನ್ನೋ ಮಾಡುವುದೂ ನನಗಿಷ್ಟವಿಲ್ಲ. ನಟಿಯಾಗಿಯೇ ತುಂಬ ದೂರ ಸಾಗಬೇಕಿದೆ. ಈ ಪೀಳಿಗೆಯ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಳ್ಳಬೇಕೆಂಬ ಕನಸಿದೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಶಾರ್ವರಿ.
ದಕ್ಷಿಣ ಭಾರತದ ಫುಡ್ ಫೇವರಿಟ್ ಎನ್ನುವ ಶಾರ್ವರಿ, "ನನ್ನ ಅಮ್ಮ ಕೂಡ ನೀನು ಸೌತ್ ಇಂಡಿಯನ್ ಹುಡುಗನನ್ನೇ ಮದುವೆಯಾಗು ಎನ್ನುತ್ತಿರುತ್ತಾರೆ. ದಿನದ 24 ತಾಸಿನಲ್ಲಿ ಯಾವ ಸಮಯದಲ್ಲಿ ದಕ್ಷಿಣ ಭಾರತದ ಊಟ, ತಿಂಡಿ ಕೊಟ್ಟರೆ ಆರಾಮಾಗಿ ತಿನ್ನುತ್ತೇನೆ. ಇಡ್ಲಿ, ದೋಸೆ, ವಡೆ ಎಲ್ಲವೂ ನನಗಿಷ್ಟ. ಯಾವುದೇ ಪ್ರದೇಶಕ್ಕೆ ಹೋದರೂ ದಣ ಭಾರತದ ಹೋಟೆಲ್ಗಳನ್ನು ಹುಡುಕುತ್ತೇನೆ. ಕೊಡಗಿಗೆ ಕೆಲ ಬಾರಿ ಬಂದಿದ್ದೇನೆ. ಬಾಳೆಹಣ್ಣು ಚಿಪ್ಸ್ ನನ್ನ ಅಚ್ಚುಮೆಚ್ಚಿನ ಸ್ನ್ಯಾಕ್' ಎಂದು ನಗುತ್ತಾರೆ.