Neha Sharma: ಪ್ರಸ್ತುತ ಡಿಜಿಟಲ್ ಯುಗವನ್ನು ಆಳುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಟೆಕ್ನಾಲಜಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಒಂದಷ್ಟು ಕಿಡಿಗೇಡಿಗಳು, ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ, ಸಿನಿ ತಾರೆಯರು ಮತ್ತು ಇತರೆ ಕ್ಷೇತ್ರದ ಸೆಲೆಬ್ರಿಟಿಗಳು ಈ ಡೀಪ್ಫೇಕ್, ಮಾರ್ಫಿಂಗ್, ನಕಲಿ ಪೋಸ್ಟ್ಗಳಿಗೆ ಬಹಳ ಸುಲಭವಾಗಿ ತುತ್ತಾಗುತ್ತಿದ್ದಾರೆ. ಇದೇ ಈಗ ತೆಲುಗು ನಟಿ ನೇಹಾ ಶರ್ಮಾ ಅವರ ಖಡಕ್ ಎಚ್ಚರಿಕೆಗೆ ಕಾರಣ.
ಸಾಮಾಜಿಕ ಜಾಲತಾಣಗಳಲ್ಲಿ ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿಸುತ್ತಿರುವ ಸಮಾಜಘಾತುಕರು, ಅತೀ ಮುಖ್ಯವಾಗಿ, ಸಿನಿಮಾ ಕಲಾವಿದರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ, ಸ್ಟಾರ್ ಮತ್ತು ಯುವ ನಟಿಮಣಿಯರು. ಅವರ ಮುಖ ಅಥವಾ ದೇಹವನ್ನು ಹೋಲುವ ರೀತಿಯಲ್ಲಿ ನಕಲಿ ವಿಡಿಯೋವನ್ನು ರಚಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಕಿಡಿಗೇಡಿಗಳು, ಇದೀಗ ನೇಹಾ ಅವರ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.
ಈ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ನಟಿ, "ತಮ್ಮ ವಿರುದ್ಧ ಡೀಪ್ಫೇಕ್ ವಿಡಿಯೋಗಳನ್ನು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ನಾನೀಗ ಕಾನೂನು ಕ್ರಮವನ್ನು ಕೈಗೊಳ್ಳುತ್ತಿದ್ದೇನೆ. ಇನ್ಮುಂದೆ, ನನ್ನ ಡೀಪ್ ಫೇಕ್ ಫೋಟೋಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸುವವರಿಗೆ ಇದು ಕೊನೇ ವಾರ್ನಿಂಗ್. ನನ್ನ ಅನುಮತಿಯಿಲ್ಲದೆ, ನನ್ನ ಮುಖವನ್ನು ಬಳಸಿ ಎಐ ವಿಡಿಯೋಗಳು ಅಥವಾ ಫೋಟೋಗಳನ್ನು ರಚಿಸುವುದನ್ನು ಇಂದೇ, ಈ ಕೂಡಲೇ ನಿಲ್ಲಿಸಿ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವ ನಕಲಿ ವಿಡಿಯೋಗಳನ್ನು ಡಿಲೀಟ್ ಮಾಡಿ" ಎಂದಿದ್ದಾರೆ.
"ಯಾವುದೇ ಎಐ ಎಡಿಟಿಂಗ್ಗಾಗಿ ಅಥವಾ ಶೇರ್ ಮಾಡುವ ಉದ್ದೇಶದಲ್ಲಿ ನನ್ನ ಮುಖವನ್ನು ಬಳಸಬೇಡಿ. ನನ್ನ ಘನತೆಗೆ ಧಕ್ಕೆ ತರುವ ಮತ್ತು ತಪ್ಪು ಚಿತ್ರಣವನ್ನು ನೀಡುವ ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ. ನನ್ನ ಗುರುತನ್ನು ಅನಧಿಕೃತವಾಗಿ ಬಳಸುವುದನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಫೇಕ್ ಅಕೌಂಟ್ಗಳನ್ನು ಬಳಸಿಕೊಂಡವರು ಅಥವಾ ಎಐ ಟೂಲ್ಸ್ ಮುಂದಿಟ್ಟು, ತಮ್ಮ ಮುಖವನ್ನು ಅಡಗಿಸಿಟ್ಟರೂ ನಿಮ್ಮನ್ನು ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.
"ಇಂತಹ ವಿಷಯಗಳನ್ನು ಸೃಷ್ಟಿಸುವ ಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳುವ ವ್ಯಕ್ತಿಗಳ ವಿರುದ್ಧ ನಾನು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ. ದಯವಿಟ್ಟು ಇದನ್ನು ಲಾಸ್ಟ್ ವಾರ್ನಿಂಗ್ ಎಂದು ಪರಿಗಣಿಸಿ, ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಿ" ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ನಟಿಯ ಈ ಖಾರವಾದ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).