More

    ರಾಜ್ಯದಲ್ಲಿ ಕಾಲರಾ ಪ್ರಕರಣಗಳು ಸಂಖ್ಯೆ 27ಕ್ಕೆ ಏರಿಕೆ

    ಬೆಂಗಳೂರು: ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಕಳೆದ ಹದಿನೈದು ದಿನಗಳಲ್ಲಿ ಬೆಂಗಳೂರು ನಗರದಲ್ಲಿ 18 ಹಾಗೂ ಮೈಸೂರಿನಲ್ಲಿ ಮೂರು ಸೇರಿ ರಾಜ್ಯದಲ್ಲಿ 21 ಮಂದಿಯಲ್ಲಿ ಕಾಲರಾ ದೃಢಪಟ್ಟಿದ್ದು, ಇದರೊಂದಿಗೆ ಪ್ರಕರಣಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕಾಲರ ಆತಂಕ ಹೆಚ್ಚಾಗಿದೆ.

    ಈ ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಕೆಲವೆಡೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದಲ್ಲದೆ ನೀರಿನ ಕೊರತೆಯಿಂದಾಗಿ ಜನರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಇದರೊಂದಿಗೆ ಕಾಲರ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.

    ಕಳೆದ ಫೆಬ್ರವರಿಯಲ್ಲಿ ರಾಮನಗರದಲ್ಲಿ 1, ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ 5, ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ 18 ಹಾಗೂ ಮೈಸೂರಿನಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.

    ಆರೋಗ್ಯ ಇಲಾಖೆ ಸೂಚನೆ: ರಾಜ್ಯದಲ್ಲಿ ವಾಂತಿ-ಭೇದಿ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಜನರು ಕುಡಿಯುವ ನೀರು ಮತ್ತು ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು. ಇದರ ಜೊತೆಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಮನೆಯ ಆಹಾರಕ್ಕೆ ಒತ್ತು ನೀಡಬೇಕು ಎಂದು ಆರೋಗ್ಯ ಇಲಾಖೆ ಸಾರ್ವಜನಿಕವಾಗಿ ಸೂಚನೆ ನೀಡಿದೆ.

    ಕಾಲರಾ ಹೇಗೆ ಹರಡುತ್ತದೆ? ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾವು ಕಲುಷಿತ ನೀರು ಮತ್ತು ಆಹಾರದ ಮೂಲಕ ಮಾನವ ದೇಹ ಸೇರಿದರೆ ಕಾಲರಾ ಹರಡುತ್ತದೆ. ಇದು ಕರುಳಿನ ಸೋಂಕು ಆಗಿದ್ದು, ವಾಂತಿ – ಭೇದಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಆಗುವ ಸಾಧ್ಯತೆಗಳಿವೆ.

    ಮುನ್ನೆಚ್ಚರಿಕಾ ಕ್ರಮಗಳೇನು?
    *ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು
    *ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು
    *ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು
    *ವಾಂತಿ, ಭೇದಿ ಆದಲ್ಲಿ ನೀರಿಗೆ ಎಲೆಕ್ಟ್ರೋಲೈಟ್ ಬೆರಸಿ ಕುಡಿಯಬೇಕು
    *ಮಲ ವಿಸರ್ಜನೆ ನಂತರ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು
    *ಹೊರಗಿನ ಆಹಾರ ಸೇವನೆಯಲ್ಲಿ ಎಚ್ಚರವಹಿಸಬೇಕು
    *ಬೇಸಿಗೆಯಲ್ಲಿ ಹೆಚ್ಚಿನ ದ್ರವಾಹಾರ ಸೇವಿಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts