More

    ಆಯಿಲ್ ಸಿಟಿ ಇನ್ಮೇಲೆ ವಿಜ್ಞಾನ ನಗರಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ರಾಜ್ಯದಲ್ಲೇ ಪ್ರಥಮ ಬಾರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕುದಾಪುರ ಪ್ರದೇಶದಲ್ಲಿ ಸೈನ್ಸ್‌ಸಿಟಿ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿದೆ.

    ಭಾರತೀಯ ವಿಜ್ಞಾನ ಕೇಂದ್ರ ಸೇರಿ ನಾಲ್ಕು ಪ್ರಮುಖ ವೈಜ್ಞಾನಿಕ ಸಂಸ್ಥೆಗಳಿರುವ ಚಳ್ಳಕೆರೆ ಈಗಾಗಲೇ ವಿಜ್ಞಾನ ನಗರಿ ಎನ್ನಿಸಿಕೊಂಡಿದ್ದರೂ ಅದಕ್ಕೀಗ ಅಧಿಕೃತ ಮುದ್ರೆ ಬೀಳಲಿದೆ.

    ಐಐಎಸ್‌ಸಿ, ಇಸ್ರೋ, ಡಿಆರ್‌ಡಿಒ, ಬಾರ್ಕ್ ಸಂಸ್ಥೆಗಳ ಎಂಟು ಸಾವಿರ ಎಕರೆ ಪ್ರದೇಶದ ಆಸುಪಾಸಿನ ಜಾಗ ಅಧಿಸೂಚಿಸಿ ಪ್ರತ್ಯೇಕ ಸೈನ್ಸ್ ಸಿಟಿ ನಿರ್ಮಿಸಲು ಯೋಚಿಸಲಾಗಿದೆ.

    ಇದರ ಬೆಳವಣಿಗೆಗೆ ಸೈನ್ಸ್‌ಸಿಟಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲೂ ಉದ್ದೇಶಿಸಲಾಗಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

    ಈ ಮಧ್ಯೆ ಕಾರ್ಯಸಾಧ್ಯತೆ ಕುರಿತು ವರದಿ ನೀಡುವಂತೆ ಖಾಸಗಿ ಕನ್ಸಲ್ಟೆನ್ಸಿ ಸಂಸ್ಥೆಗೆ ಜವಾಬ್ದಾರಿ ವಹಿಸಿದ್ದು ಕನ್ಸಲ್ಟೆನ್ಸಿ ಅಧಿಕಾರಿಗಳು ಫೆ.10ರಂದು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಭೇಟಿ ಮಾಡಿ ಸಮಾಲೋಚಿಸಿದ್ದಾರೆ.

    ದೇಶದ ಚಿತ್ತ ಚಳ್ಳಕೆರೆಯತ್ತ: ಈಗಾಗಲೇ ದೇಶದ ಚಿತ್ತ ಚಳ್ಳಕೆರೆಯತ್ತ ಹರಿದಿದೆ. ಡಿಆರ್‌ಡಿಒ ಮಾನವ ರಹಿತ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ. ಗಗನಯಾತ್ರಿಗಳ ತರಬೇತಿಗೆ ಇಸ್ರೋ ಸಂಸ್ಥೆ 2700 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ಯಂಗ್ ಹ್ಯೂಮನ್ ಸ್ಪೆಸ್ ಫ್ಲೈಟ್ ಸೆಂಟರ್ ನಿರ್ಮಾಣಕ್ಕೆ ಮುಂದಾಗಿದೆ.

    ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿಕೆ: ಉದ್ದೇಶಿತ ಸೈನ್ಸ್‌ಸಿಟಿಗೆ ಕುದಾಪುರ ಸುತ್ತಲಿನ 100 ಚದರ ಕಿ.ಮೀ.ವ್ಯಾಪ್ತಿಯಲ್ಲಿರುವ ಹಳ್ಳಿಗಳು ಹಾಗೂ ಖಾಸಗಿ, ಸರ್ಕಾರಿ ಜಮೀನು ಎಷ್ಟಿದೆ ಎಂದು ಅರಿಯಲು ಗಡಿ ಗುರುತಿಸಲಾಗುವುದು.ಟೌನ್‌ಶಿಪ್‌ಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು. ಕೇಂದ್ರೀಯ ವಿದ್ಯಾಲಯ, ಆಸ್ಪತ್ರೆ, ವಾಣಿಜ್ಯೋದ್ಯಮ ಕೇಂದ್ರಗಳು, ವಸತಿ ಮತ್ತಿತರ ಸೌಕರ್ಯ ಒದಗಿಸಲಾಗುವುದು. ಈ ಸಂಬಂಧ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts