More

    ಹಿಂದು ಮಹಾಗಣಪತಿ ಶೋಭಾಯಾತ್ರೆಗೆ ಕರೊನಾ ಕರಿನೆರಳು

    ಚಿತ್ರದುರ್ಗ: ರಾಜ್ಯದಲ್ಲೇ ಏರುಮುಖದಲ್ಲಿರುವ ಸೋಂಕಿನ ಸಂಖ್ಯೆ ಗಮನಿಸಿದರೆ ಮುಂಬರುವ ದಿನ ಹಬ್ಬಗಳ ಮೇಲೆ ಕರೊನಾ ಕರಿ ನೆರಳು ಬೀಳುವುದು ನಿಚ್ಚಳವೆನ್ನಬಹುದು. ಇದರಿಂದಾಗಿ ಚಿತ್ರದುರ್ಗದ ಪ್ರತಿಷ್ಠಿತ ಹಿಂದು ಮಹಾಗಣಪತಿ ಶೋಭಾಯಾತ್ರೆ ನಡೆಯುವ ಬಗ್ಗೆ ಅನುಮಾನ ಹುಟ್ಟಿಕೊಂಡಿವೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೆ ಪಾತ್ರವಾದ ಕೋಟೆನಾಡಿನ ಹಿಂದು ಮಹಾಗಣಪತಿ ಶೋಭಾಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಲಕ್ಷಾಂತರ ಜನರು ಭಾಗವಹಿಸುತ್ತಿದ್ದರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿತ್ತು. ಈ ಹೊತ್ತಿಗೆ ಸಮಿತಿಯು ಗಣೇಶೋತ್ಸವದ ಸಿದ್ಧತೆಯಲ್ಲಿ ಮಗ್ನವಾಗಿರುತ್ತಿತ್ತು. ಪ್ರತಿಷ್ಠಾಪನಾ ದಿನದಿಂದ ಶೋಭಾಯಾತ್ರೆ ಅವಧಿಯೊಳಗೆ ನಾನಾ ಸಾಂಸ್ಕೃತಿಕ ಕಾರ‌್ಯಕ್ರಮ, ಚಿಂತಕರ ಗೋಷ್ಠಿಗಳನ್ನು ನಿಗದಿಪಡಿಸಲಾಗುತ್ತಿತ್ತು. ಮಹಾರಾಷ್ಟ್ರದಿಂದ ಪ್ರತಿ ವರ್ಷ ಒಂದೊಂದು ಅವತಾರದ ಗಣೇಶ ಮೂರ್ತಿ ತರಲಾಗುತ್ತಿತ್ತು. ಆದರೆ ಕರೊನಾ ಈ ಎಲ್ಲದಕ್ಕೂ ಅಡ್ಡಗಾಲು ಹಾಕಿದೆ.

    ಪರಿವಾರದ ಪ್ರಮುಖರು ಇನ್ನಾರು ತಿಂಗಳು ಸಭೆ, ಸಮಾರಂಭಗಳು ಬೇಡವೆಂದಿದ್ದಾರಂತೆ. ಈಗಾಗಲೇ ಒಂದು ಬಾರಿ ಅನೌಪಚಾ ರಿಕವಾಗಿ ಚರ್ಚಿಸಿರುವ ಸಮಿತಿ ಸದಸ್ಯರು ಈ ಬಾರಿಯ ಗಣೇಶೋತ್ಸವವನ್ನು ಪ್ರತಿಷ್ಠಾಪನೆಗೆ ಮಾತ್ರ ಸೀಮಿತಗೊಳಿಸಿ, ಶೋಭಾ ಯಾತ್ರೆ ಕೈ ಬಿಡಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ.

    1500ಕ್ಕೂ ಹೆಚ್ಚು ಕಡೆ ಪ್ರತಿಷ್ಠಾಪನೆ: ಈ ಬಾರಿ ಆಗಸ್ಟ್ 22 ರಂದು ಗಣೇಶ ಚತುರ್ಥಿಯಿದ್ದು, ಗಣೇಶ ವಿಗ್ರಹಗಳ ತಯಾರಿಕೆ ಆರಂಭವಾಗಿರುತ್ತಿತ್ತು. ಜಿಲ್ಲಾದ್ಯಂತ 1500 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಪೊಲೀಸ್ ಸಹಿತ ಪೂರಕ ಇಲಾಖೆಗಳು ಮಾರ್ಗಸೂಚಿ ಸಿದ್ಧಪಡಿಸುತ್ತಿದ್ದವು. ಈ ಬಾರಿ ಹಬ್ಬಗಳ ಅದ್ಧೂರಿ ಆಚರಣೆ ಅಸಾಧ್ಯ ಎಂಬಂತೆ ತೋರುತ್ತಿದೆ.

    ಗೃಹ ಸಚಿವರ ಸೂಚನೆ: ಗಣೇಶೋತ್ಸವದ ಬಗ್ಗೆ ಯಾವುದೇ ತೀರ್ಮಾನವಾಗದಿದ್ದರೂ ಪೊಲೀಸ್ ಇಲಾಖೆ ಬಂದೋಬಸ್ತ್‌ಗೆ ಸಂಬಂಧಿಸಿದ ಕೆಲಸವನ್ನು ಆರಂಭಿಸುವಂತೆ ಇತ್ತೀಚೆಗೆ ನಗರಕ್ಕೆ ಭೇಟಿ ಕೊಟ್ಟಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸರಳತೆಗೆ ಒತ್ತು: ಈ ಬಾರಿ ಗಣೇಶೋತ್ಸವದಲ್ಲಿ ಸರಳತೆಗೆ ಹೆಚ್ಚಿನ ಒತ್ತು ಇರುತ್ತದೆ. ಶೋಭಾಯಾತ್ರೆ ಸಾಧ್ಯವಾಗದೇ ಹೋಗಬಹುದು. ಸಮಿತಿ ಸದಸ್ಯರು ಇನ್ನೊಮ್ಮೆ ಚರ್ಚಿಸಿ ಆಚರಣೆ ಕುರಿತಂತೆ ಅಂತಿಮ ನಿರ್ಧಾರಕ್ಕೆ ಬರಬೇಕಿದೆ.
    > ಸುರೇಶ್, ಜಿಲ್ಲಾಧ್ಯಕ್ಷ ವಿಶ್ವ ಹಿಂದು ಪರಿಷತ್, ಚಿತ್ರದುರ್ಗ.

    ಅಧಿಕ ಸಂಖ್ಯೆಯಲ್ಲಿ ಜನ ಸೇರುವ ಯಾವುದೇ ಮೆರವಣಿಗೆ, ಜಾತ್ರೆಗಳಿಗೆ ಅನುಮತಿ ಸಿಗುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟ. ಅನ್‌ಲಾಕ್ ಫೇಸ್‌ಒನ್ ಮಾರ್ಗಸೂಚಿಯಂತೆ ಈ ಮಾಸಾಂತ್ಯದವರೆಗೂ ಯಾವುದೇ ಸಮಾರಂಭಗಳಿಗೆ ಅವಕಾಶವಿಲ್ಲ. ಚಿತ್ರದುರ್ಗದ ಗಣೇಶ ಶೋಭಾಯಾತ್ರೆ ನಡೆಯುವುದು ಅನುಮಾನವಿದೆ. ಆದರೂ ಇಲಾಖೆ ಅಗತ್ಯ ಬಂದೋಬಸ್ತ್ ಸಿದ್ಧತೆ ನಡೆಸಲಿದೆ.
    > ಜಿ.ರಾಧಿಕಾ, ಎಸ್ಪಿ,ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts