More

    ನಗರಸಭೆ ಅಂಗಳದಲ್ಲಿ ಕರುಣೆ ಗೋಡೆ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಉಳ್ಳವರು ಮತ್ತು ಇಲ್ಲದವರ ಮಧ್ಯೆ ಸಂಪರ್ಕ ಸೇತುವೆ ಆಗಿ ಕಾರ್ಯನಿರ್ವಹಿಸುವ ಮಾನವೀಯ ಕೆಲಸಕ್ಕೆ ಚಿತ್ರದುರ್ಗ ನಗರಸಭೆ ಕೈ ಹಾಕಿದೆ.

    ಉಳ್ಳವರಿಗೆ ಬೇಡವಾದ ವಸ್ತುಗಳು, ಬಡವರಿಗೆ ಅತ್ಯಗತ್ಯವಾಗಿರುತ್ತವೆ. ಈ ಕಾರಣಕ್ಕೆ ಬೇಡವಾದ ಉತ್ತಮ ವಸ್ತುಗಳನ್ನು ಶ್ರೀಮಂತರು ತಂದಿಡಲು, ಅಲ್ಲಿಂದ ಬಡವರು ತೆಗೆದುಕೊಂಡು ಹೋಗಲು ಕಲ್ಪಿಸಿರುವ ವ್ಯವಸ್ಥೆಯೇ ಕರುಣೆ ಗೋಡೆ.

    ಈ ಯೋಜನೆ ಜಾರಿಗೆ ನಗರಸಭೆ ಸಕಲ ಸಿದ್ಧತೆ ಕೈಗೊಂಡಿದ್ದು, ಶೀಘ್ರದಲ್ಲಿಯೇ ಚಾಲನೆ ನೀಡಲಿದೆ. ನಗರಸಭೆ ಕಚೇರಿ ಆವರಣದಲ್ಲಿ ಇದಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

    ಬಟ್ಟೆ ಹೊರತು ಪಡಿಸಿ ತಮಗೆ ನಿರುಪಯಕ್ತ ಎನಿಸುವ ಹಾಗೂ ಅಗತ್ಯವುಳ್ಳವರು ಅವನ್ನು ಉಪಯೋಗಿಸಬಹುದು ಎನ್ನುವಂತ ಉ್ತಮ ವಸ್ತುಗಳನ್ನು ಯಾರು ಬೇಕಾದರೂ ಯಾವ ಸಮಯದಲ್ಲಿ ಆದರೂ ಇಲ್ಲಿ ತಂದಿಡಬಹುದು.

    ನಗರಸಭೆ ಆಡಳಿತಾಧಿಕಾರಿ ಆದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಆಸಕ್ತಿಯಿಂದಾಗಿ ವಾಲ್ ಆಫ್ ಕೈಂಡ್‌ನೆಸ್ ಕಾರ್ಯಕ್ರಮ ಜಾರಿಯಾಗುತ್ತಿದೆ. ಅಗತ್ಯವಿರುವಂಥವರು ಇಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ, ತೀರಾ ಅನುಪಯುಕ್ತ ವಸ್ತುಗಳನ್ನು ತಂದಿಡಲು ಅವಕಾಶ ಇಲ್ಲ ಎಂಬುದು ವಿಶೇಷ.

    ಮನೆ ಬಳಕೆ ವಸ್ತು, ಬೊಂಬೆ, ಪುಸ್ತಕ, ಸ್ಟೇಷನರಿ ಸಹಿತ ಹತ್ತು ಹಲವು ನಿತ್ಯಪಯೋಗಿ ವಸ್ತುಗಳನ್ನು ಇಲ್ಲಿ ತಂದಿಡಬಹುದು. ನಗರಸಭೆ ಸಿಬ್ಬಂದಿ ಈ ಗೋಡೆಯನ್ನು ನಿರ್ವಹಿಸಲಿದೆ. ಬಡ ಜನರಿಗೆ ಅನುಕೂಲವಾಗುವ ಈ ಕರುಣೆ ಗೋಡೆ 24/7 ಕಾರ್ಯ ನಿರ್ವಹಿಸಲಿದೆ.

    ನಗರದಲ್ಲಿ ಈ ಪ್ರಯತ್ನ ನಡೆದಿತ್ತು: ಈ ಹಿಂದೆ ಇದೇ ಮಾದರಿ ಪ್ರಯತ್ನವೊಂದು ಬಿ.ಡಿ.ರಸ್ತೆಯಲ್ಲಿರುವ ವಿವೇಕಾನಂದ ಪೆಟ್ರೋಲ್ ಬಂಕ್ ನಡೆಸಿತ್ತು. ಈಗ ನಗರಸಭೆ ಇಂಥದೊಂದು ಕೆಲಸಕ್ಕೆ ಮುಂದಾಗಿದೆ. ಜನಪ್ರತಿನಿಧಿಗಳ ಸಮಯಾವಕಾಶ ನೋಡಿಕೊಂಡು ಕರುಣೆಯ ಗೋಡೆ ಉದ್ಘಾಟನೆ ಕಾರ್ಯಕ್ರಮ ಶೀಘ್ರ ಆಯೋಜಿಸಲಾಗುವುದು ಎನ್ನುತ್ತಾರೆ ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು.

    ಬಟ್ಟೆಗಳನ್ನು ತಂದಿಡಲು ಅವಕಾಶ ಇಲ್ಲ: ಬಟ್ಟೆಗಳಿಗೆ ತಂದಿಡಲು ಖಂಡಿತಾ ಅವಕಾಶ ಕೊಡುವುದಿಲ್ಲ ಮತ್ತು ಸಾರ್ವಜನಿಕರು ಕೂಡ ತೀರಾ ವೇಸ್ಟ್ ಎನ್ನಿಸುವಂಥ ವಸ್ತುಗಳನ್ನು ಇಲ್ಲಿ ತಂದಿಡ ಬಾರದು. ಇದೊಂದು ಮನವೀಯ ಕಾರ್ಯ. ತಮಗೆ ಅಗತ್ಯವಲ್ಲದ, ಆದರೆ, ಬೇರೆಯವರ ಬಳಕೆಗೆ ನಿಜಕ್ಕೂ ಯೋಗ್ಯವಿರುವಂಥ ವಸ್ತುವನ್ನು ತಂದಿಡುವ ಮೂಲಕ ಮಾನವೀಯ ಕೆಲಸಕ್ಕೆ ನಾಗರಿಕರು ಕೈ ಜೋಡಿಸಬೇಕು. ಚಿತ್ರದುರ್ಗದಲ್ಲಿ ಯಶಸ್ವಿಯಾದರೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಈ ಯೋಜನೆ ಆರಂಭಿಸಲಾಗುವುದು ಎನ್ನುತ್ತಾರೆ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts