More

    ಗ್ರಾಪಂಗಳಿಗೆ ಶುದ್ಧ ಕುಡಿವ ನೀರಿನ ಘಟಕದ ಹೊಣೆ

    ಚಿತ್ರದುರ್ಗ: ತಾಲೂಕಿನಲ್ಲಿ ಹಾಳಾಗಿರುವ ಶುದ್ಧ ಕುಡಿವ ನೀರಿನ ಘಟಕಗಳನ್ನು ಸರಿಪಡಿಸಿದ ನಂತರ ಅವುಗಳ ನಿರ್ವಹಣೆ ಹೊಣೆಯನ್ನು ಗ್ರಾ.ಪಂ. ಗಳಿಗೆ ವಹಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಜಿಪಂನಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ನಿರ್ಣಯಿಸಿದೆ.

    ಆರ್‌ಒಗಳಿಗೆ ಸಂಬಂಧಿಸಿದ ವಿಚಾರವೊಂದನ್ನೇ ಚರ್ಚಿಸಲು ಶಾಸಕರು, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಪಂ ಅಧಿಕಾರಿಗಳ ಸಭೆ ಕರೆದಿದ್ದರು.

    ಆರ್‌ಒಗಳ ಪೈಕಿ ಹಲವು ಘಟಕಗಳಲ್ಲಿ, ಆರಂಭದಿಂದ ಈವರೆಗೆ ಜನರಿಗೆ ನೀರು ದೊರಕಿಲ್ಲ. ಆರ್‌ಒಗಳ ನಿರ್ವಹಣೆ ಹೊಣೆ ಖಾಸಗಿ ಯವರಿಗೆ ವಹಿಸಲಾಗಿದೆ. ಆದರೆ ಗ್ರಾಪಂಗಳಲ್ಲಿ ವಾಟರ್‌ಮನ್‌ಗಳಿರುತ್ತಾರೆ. ಅಲ್ಲಿಯ ಜನರಿಗೆ ನೀರೊದಗಿಸುವ ಜವಾಬ್ದಾರಿಯೂ ಗ್ರಾಪಂ ಆಡಳಿತಕ್ಕೆ ಇರುತ್ತದೆ. ಕರೊನಾ ಹಿನ್ನೆಲೆಯಲ್ಲಿ ಶುದ್ಧ ಕುಡಿವ ನೀರಿನ ಬೇಡಿಕೆ ಹೆಚ್ಚಿದೆ. ಆದ್ದರಿಂದ ದುರಸ್ತಿಗೆ ಬಿಡುಗಡೆಯಾದ 1.69 ಕೋಟಿ ರೂ. ಬಳಸಿಕೊಂಡು ಘಟಕಗಳನ್ನು ದುರಸ್ತಿಗೊಳಿಸಿ ಗ್ರಾಪಂಗಳಿಗೆ ವಹಿಸಬೇಕು. ಸರಿಯಾಗಿ ನಿರ್ವಹಿಸದ ಏಜೆನ್ಸಿಗಳ ಠೇವಣಿ/ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಂಡು, ಬ್ಲಾೃಕ್‌ಲಿಸ್ಟ್‌ಗೆ ಸೇರಿಸುವಂತೆ ಜಿಪಂ ಸಿಇಒ ಟಿ.ಯೋಗೇಶ್‌ಗೆ ಸೂಚಿಸಿದರು.

    ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಹನುಮಂತಪ್ಪ ಮಾತನಾಡಿ, ಘಟಕಗಳ ನಿರ್ವಹಣೆಯನ್ನು ಏಜೆನ್ಸಿಗಳಿಗೆ ವಹಿಸಲಾಗುತ್ತಿದೆ. ಅವುಗಳಿಗೆ ನಿರ್ವಹಣೆ ಮತ್ತು ದುರಸ್ತಿ ವೆಚ್ಚವನ್ನು ಭರಿಸಲಾಗುತ್ತಿದೆ ಎಂದರು.

    ಜಿ.ಪಂ.ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡಿ, ದಂಡಿನ ಕುರುಬರಹಟ್ಟಿ, ಕುಂಚಿಗನಾಳ್, ಗೋನೂರು,ಪಂಡ್ರಹಳ್ಳಿಗಳಲ್ಲಿ ಈ ಘಟಕಗಳಿಂದ ಒಂದು ದಿನವೂ ನೀರು ಕುಡಿದಿಲ್ಲವೆಂದರು.

    ಸರಿಯಾಗಿ ನಿರ್ವಹಣೆ ಮಾಡದ ಏಜೆನ್ಸಿಗಳ ವಿರುದ್ಧ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಇಒ ಹೇಳಿದರು.
    ಜಿಪಂ ಸದಸ್ಯ ಕೆ.ಟಿ.ಗುರುಮೂರ್ತಿ, ತಾ.ಪಂ.ಅಧ್ಯಕ್ಷ ಡಿ.ಎಂ.ಲಿಂಗರಾಜು, ಇಒ ಎಚ್.ಕೃಷ್ಣನಾಯ್ಕ, ವಿವಿಧ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts