More

    ಜೋಗಿಮಟ್ಟಿ ಪರಿಸರ ಸೂಕ್ಷ್ಮವಲಯ ನಿಗದಿಗೆ ಶಿಫಾರಸು

    ಚಿತ್ರದುರ್ಗ: ಜೋಗಿಮಟ್ಟಿ ವನ್ಯಜೀವಿಧಾಮದ 10 ಕಿ.ಮೀ. ಸುತ್ತಲಿರುವ ಪರಿಸರ ಸೂಕ್ಷ್ಮವಲಯ ವ್ಯಾಪ್ತಿ (ಇಎಸ್‌ಝೆಡ್)ಯನ್ನು ಒಂದು ಕಿ.ಮೀ.ಗೆ ಅಂತಿಮವಾಗಿ ಗುರುತಿಸಿ ಅಧಿಸೂಚಿಸಲು ಅರಣ್ಯಇಲಾಖೆ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯಸರ್ಕಾರಕ್ಕೆ ಶಿಫಾರಸು ಕಳಿಸಿದೆ.

    1940 ಜುಲೈ 8 ರಂದು ಮೀಸಲು ಅರಣ್ಯವೆಂದಿದ್ದ 38.8 ಚದರ ಮೈಲಿ (10048.97ಹೆ.) ಜೋಗಿಮಟ್ಟಿ ಅರಣ್ಯವನ್ನು ರಾಜ್ಯ ಸರ್ಕಾರ ವನ್ಯಜೀವಿಧಾಮವೆಂದು 2015 ಡಿಸೆಂಬರ್ 23 ರಂದು ಅಧಿಸೂಚಿಸಿತ್ತು.

    ಹೊಸದಾಗಿ ಒಂದು ಅರಣ್ಯಪ್ರದೇಶ ವನ್ಯಜೀವಿ ಅಥವಾ ರಾಷ್ಟ್ರೀಯ ಅರಣ್ಯ ಉದ್ಯಾನವೆಂದು ಘೋಷಣೆಯಾದರೆ, ಅದರ ಸುತ್ತಲ 10 ಕಿ.ಮೀ. ವ್ಯಾಪ್ತಿ ಪರಿಸರ ಸೂಕ್ಷ್ಮವಲಯವೆಂದು ಡೀಮ್ಡ್ ಆಗಿ ನಿರ್ಧಾರವಾಗಿರುತ್ತ್ತದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ವನ್ಯ ಜೀವಿಗಳ ಆವಾಸ ಸ್ಥಾನದ ನಿರ್ದಿಷ್ಟ ಅಂತರದಲ್ಲಿ ಪರಿಸರಕ್ಕೆ ಧಕ್ಕೆ ಆಗುವಂತಹ ಚಟುವಟಿಕೆಗಳಿಗೆ ಅವಕಾಶ ಕೊಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯಇಲಾಖೆ ಅಧಿಕಾರಿಗಳು ಜೋಗಿಮಟ್ಟಿಯ 10 ಕಿ.ಮೀ.ಅಂತರದಲ್ಲಿ ಕಲ್ಲುಗಣಿ, ಕ್ರಷರ್ ಮತ್ತಿತರ ಪರಿಸರಕ್ಕೆ ಧಕ್ಕೆ ತರುವಂಥ ಚಟುವಟಿಕೆಗಳಿಗೆ ಹೊಸದಾಗಿ ಅನುಮತಿ ನಿರಾಕರಿಸಿದ್ದರು.

    ಕಳೆದ ಆಗಸ್ಟ್ 13 ರಂದು ವನ್ಯಜೀವಿಧಾಮದ ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯನ್ನು ಒಂದು ಕಿ.ಮೀ.ಗೆ ನಿಗದಿಗೊಳಿಸಬೇಕೆಂಬ ಡಿಸಿಎಫ್ ಶಿಫಾರಸನ್ನು ಚೀಫ್ ವೈಲ್ಡ್ ಲೈಫ್ ವಾರ್ಡನ್ ಸೆಪ್ಟೆಂಬರ್ 9 ರಂದು ರಾಜ್ಯ ಸರ್ಕಾರಕ್ಕೆ ಕಳಿಸಿದ್ದಾರೆ. ರಾಜ್ಯಸರ್ಕಾರ ಈ ಶಿಫಾರಸನ್ನು ಪರಿಶೀಲಿಸಿ ಅಧಿಸೂಚನೆಗೆ ಕೋರಿ ಕೇಂದ್ರಕ್ಕೆ ಕಳಿಸಬೇಕಿದೆ.

    ಕೇಂದ್ರ ಇಎಸ್‌ಝೆಡ್ ವ್ಯಾಪ್ತಿ ಎಷ್ಟೆಂದು ತೀರ್ಮಾನಿಸಿ ಅಧಿಸೂಚನೆ ಹೊರಡಿಸಲಿದೆ. ಒಂದು ವೇಳೆ ಅರಣ್ಯಾಧಿಕಾರಿಗಳ ಶಿಫಾರಸಿನಂತೆ ವ್ಯಾಪ್ತಿ ಒಂದು ಕಿ.ಮಿ.ಗೆ ನಿಗದಿ ಆದರೆ ಜೋಗಿಮಟ್ಟಿ ಪರಿಸರಕ್ಕೆ ಧಕ್ಕೆ ಆಗಲಿದೆ ಎಂಬ ಆತಂಕ ಎದುರಾಗಿದೆ.

    ಪರಿಸರ ಸೂಕ್ಷ್ಮವಲಯದ ವ್ಯಾಪ್ತಿ ತೀರ್ಮಾನವಾಗದೇ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ 24 ಕಲ್ಲು ಕ್ವಾರಿ ಮಾಲೀಕರಿಗೆ ಚಟುವಟಿಕೆ ಸ್ಥಗಿತಕ್ಕೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ನೋಟಿಸ್ ಮೀರಿ ಚಟುವಟಿಕೆ ಮುಂದುವರಿಸಿದ್ದ ಕೆಲವು ಕ್ವಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts