More

    ಕೊಯ್ಲಿಗೆ ಬಂದ ಹಣ್ಣು, ತರಕಾರಿ ಕೇಳೋರಿಲ್ಲ…

    ಚಿತ್ರದುರ್ಗ: ಲಾಕ್‌ಡೌನ್‌ನ ಸಂದರ್ಭದಲ್ಲಿ ಕೃಷಿ ಹಾಗೂ ತೋಟಗಾರಿಕೆ ಖರೀದಿಗೆ ಅನುಕೂಲ ಮಾಡಿಕೊಡುವ ರಾಜ್ಯ ಸರ್ಕಾರದ ಹೇಳಿಕೆಗೂ, ನಡೆಗೂ ವ್ಯತ್ಯಾಸವಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೊಯ್ಲಿಗೆ ಸಜ್ಜಾಗಿರುವ ಹಣ್ಣು, ಹಂಪಲು, ತರಕಾರಿಗಳ ಮಾರಾಟ ಸಾಧ್ಯವಾಗುತ್ತಿಲ್ಲ. ನಮ್ಮ ನೆರವಿಗೆ ಸ್ಥಾಪಿಸಿರುವ ಅಗ್ರಿ ವಾರ್ ರೂಂ ಪ್ರಯೋಜನಕ್ಕೆ ಬರುತ್ತಿಲ್ಲ. ಲಕ್ಷಾಂತರ ರೂ.ಖರ್ಚು ಮಾಡಿ ಬೆಳೆದ ಪಪ್ಪಾಯ, ಸಪೋಟ, ಕಲ್ಲಂಗಡಿ, ಕರಬೂಜ, ಬಾಳೆ ಮೊದಲಾದ ಹಣ್ಣು ಹಂಪಲು, ಟೊಮ್ಯಾಟೊ, ಬೀಟ್ ರೊಟ್, ಹೂ ಕೋಸು ಮೊದಲಾದ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಪರದಾಡಬೇಕಿದೆ. ಮಾರುಕಟ್ಟೆಗೆ ಹೋದರೆ ಕೊಳ್ಳುವವರಿಲ್ಲ. ಆದ್ದರಿಂದ ಕೊಯ್ಯುವ ಹಾಗೂ ಸಾಗಾಟದ ಖರ್ಚು ಗಿಟ್ಟದ ಕಾರಣಕ್ಕೆ ಕಣ್ಣೆದುರು ಬೆಳೆ ನಾಶವಾದರೂ ಸುಮ್ಮನಿರುವಂತಾಗಿದೆ ಎಂದು ರೈತರು ನೋವಿನ ಮಾತುಗಳನ್ನಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸದ್ಯ ಟೊಮ್ಯಾಟೊ 100 ಟನ್ ಬೆಳೆ ಮಾರಾಟಕ್ಕೆ ಸಜ್ಜಾಗಿದೆ. ಚಳ್ಳಕೆರೆ ತಾಲೂಕ ಪಿ.ಮಹದೇವಪುರದ ರೈತರೊಬ್ಬರು 25 ಟನ್ ಸಪೋಟ ಬೆಳೆದಿದ್ದಾರೆ. ದೇವಾಲಯಗಳು ಬಂದ್ ಆಗಿರುವುದರಿಂದ ಹೂವುಗಳಿಗೆ ಬೇಡಿಕೆ ಇಲ್ಲ. ಹೀಗಾಗಿ ಹೂವಿನ ಬೆಳೆಗಾರರು ಕಂಗೆಟ್ಟಿದ್ದಾರೆ.

    ಖರೀದಿದಾರರ ಸಭೆ: ಮಾರಾಟಕ್ಕೆ ಸಿದ್ಧವಾಗಿರುವ ತೋಟಗಾರಿಕೆ ಉತ್ಪನ್ನಗಳ ಖರೀದಿಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನಲ್ಲಿ ಖರೀದಿದಾರರ ಸಭೆ ಮಾಡಿದ್ದೇವೆ. ಟೊಮ್ಯಾಟೊ ಬೆಳೆ ಖರೀದಿ ಸಮಸ್ಯೆಗೆ ಎರಡು ದಿನದಲ್ಲಿ ಪರಿಹಾರ ಸಿಗಬಹುದು. ತರಕಾರಿ, ಹಣ್ಣು,ಹಂಪಲ ಮಾರಾಟಕ್ಕೆ ಮುಂದಾಗಿರುವ ರೈತರಿಗೆ ಇಲಾಖೆ ನೆರವಾಗಲಿದೆ. ತರಕಾರಿ-ಹಣ್ಣು ಮಾರಾಟಕ್ಕೆಂದು ಸಂಚರಿಸುವ ಹಾಪ್‌ಕಾಮ್ಸ್ 2 ವಾಹನಗಳ ಸಂಖ್ಯೆಯನ್ನು ಏ.9ರಿಂದ 15ಕ್ಕೆ ಏರಿಸಲಾಗಿದೆ ಎಂದು ತೋಟಗಾರಿಕೆ ಡಿಡಿ ಜಿ.ಸವಿತಾ ಹೇಳಿದ್ದಾರೆ.

    ಖರೀದಿ ಕೇಂದ್ರ: ಏ.6ರಿಂದ ಜಿಲ್ಲೆಯಲ್ಲಿ ರಾಗಿ,ಕಡ್ಲೆ ಖರೀದಿ ಆರಂಭವಾಗಿದೆ. ಚಿತ್ರದುರ್ಗ,ಹಿರಿಯೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ತಲಾ 3, ಹೊಳಲ್ಕೆರೆಯಲ್ಲಿ 1 ಹಾಗೂ ಹೊಸದುರ್ಗ ತಾಲೂಕಲ್ಲಿ 2 ಖರೀದಿ ಕೇಂದ್ರಗಳಿವೆ. ಚಿತ್ರದುರ್ಗ,ಹೊಸದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಕೇಂದ್ರಗಳಲ್ಲಿ ರಾಗಿ ಖರೀದಿಸಲಾಗುತ್ತಿದೆ. ಎಪಿಎಂಸಿಗಳಲ್ಲೂ ಕೃಷಿ ಉತ್ಪನ್ನಗಳ ಖರೀದಿ ನಡೆದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವಪ್ಪ ಹೇಳಿದ್ದಾರೆ.

    ಮುಂಗಾರು ಹಂಗಾಮು: ಕೃಷಿಗೆ ಸಂಬಂಧಿಸಿದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳ ಕೊರತೆ ಇಲ್ಲ. ಜಿಲ್ಲೆಯಲ್ಲಿ 22 ಕೃಷಿ ಯಂತ್ರಧಾರೆಗಳು, 22 ರೈತ ಸಂಪರ್ಕ ಕೇಂದ್ರಗಳಿವೆ. ಖಾಸಗಿ ಬೀಜ, ಗೊಬ್ಬರ, ರಾಸಾಯಿನಿಕ ಅಂಗಡಿ ಮಳಿಗೆಗಳು ತೆರೆಯುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 5000 ಟನ್ ಯೂರಿಯಾ, 6000 ಡಿಎಪಿ ದಾಸ್ತಾನಿದೆ. ಸಮಸ್ಯೆಗಳಿದ್ದರೆ ರೈತರು ಅಗ್ರಿವಾರ್ ರೂಂ (080-2212818, 22210237)ಬೆಳಗ್ಗೆ 8 ರಿಂದ ರಾತ್ರಿ8ರವರೆಗೆ ಸಂಪರ್ಕಿಸಬಹುದೆಂದು ಕೃಷಿ ಇಲಾಖೆ ತಿಳಿಸಿದೆ.

    ಆವಕದಲ್ಲಿ ಏರಿಕೆ: ಚಿತ್ರದುರ್ಗ ಎಪಿಎಂಸಿಗೆ ಕೃಷಿ ಉತ್ಪನ್ನಗಳ ಆವಕದಲ್ಲಿ ಏಕಾಏಕಿ ಏರಿಕೆ ಕಂಡಿದೆ. ಶುಕ್ರವಾರ ರಜೆ ಹಿನ್ನೆಲೆಯಲ್ಲಿ ಬುಧವಾರದಂದೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳ ಆವಕವಾಗಿದೆ. ಕಡ್ಲೆ-1500 ಚೀಲ, ಶೇಂಗಾ-1684, ಕುಸುಬೆ-21, ಅಲಸಂದೆ-5, ಮೆಕ್ಕೆಜೋಳ-7437, ನವಣೆ-205 ಹಾಗೂ ಸೂರ‌್ಯಕಾಂತಿ 108 ಚೀಲ ಬಂದಿದೆ.

    ಪಿ.ಮಹದೇವಪುರ ರೈತ ಹನುಮಂತ ರಾಯರೆಡ್ಡಿ ಹೇಳಿಕೆ: ನನ್ನ 18 ಎಕರೆ ಜಮೀನಲ್ಲಿ ಪ್ರಸ್ತುತ 25 ಟನ್ ಸಪೋಟ ಮಾರಾಟಕ್ಕೆ ತೊಂದರೆಯಾಗಿದೆ. ಅಗ್ರಿರೂಂ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಹಾಪ್‌ಕಾಮ್ಸ್‌ನಿಂದ ಹಣ್ಣು-ತರಕಾರಿ ಖರೀದಿಸಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts