More

    ಬದಲಾಗದಿದ್ರೆ ಗಡಿಪಾರು ಶಿಕ್ಷೆ

    ಚಿತ್ರದುರ್ಗ: ಕೃತ್ಯ ಎಸಗುವ ಚಾಳಿ ಸಂಪೂರ್ಣ ಕೈ ಬಿಡದಿದ್ದರೇ ಗೂಂಡಾ ಕಾಯ್ದೆ ಹಾಗೂ ಗಡಿಪಾರು ಅಸ್ತ್ರ ಬಳಸುವುದಾಗಿ ಎಸ್ಪಿ ಜೆ.ರಾಧಿಕಾ ಎಂಒಬಿಗಳಿಗೆ (ಅಪರಾಧ ಹಿನ್ನೆಲೆ ಉಳ್ಳ ವ್ಯಕ್ತಿಗಳು) ಖಡಕ್ ಎಚ್ಚರಿಕೆ ನೀಡಿದರು.

    ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಚಿತ್ರದುರ್ಗ ಪೊಲೀಸ್ ಉಪ ವಿಭಾಗ ವ್ಯಾಪ್ತಿ ಠಾಣೆಗಳ ಎಂಒಬಿಗಳ ಪರೇಡ್ ವೇಳೆ ಸೂಚನೆ ನೀಡಿದರು.

    ದುಷ್ಕೃತ್ಯ ಕೈಬಿಟ್ಟು ಸಮಾಜದಲ್ಲಿ ಒಳ್ಳೆಯರಾಗಿ ಬಾಳಿ. ಅದಕ್ಕೆ ಇಲಾಖೆ ಸಂಪೂರ್ಣ ಸಹಕಾರವಿದೆ. ತಪ್ಪು ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಬೇಡಿ. ಹೆಜ್ಜೆ ಗುರುತು, ಬೆರಳಚ್ಚು ಸಹಿತ ನಿಮ್ಮ ಎಲ್ಲ ಮಾಹಿತಿ ನಮ್ಮಲ್ಲಿದೆ. ಅಪರಾಧ ಎಸಗಿದಾಗ ತಕ್ಷಣಕ್ಕೆ ಗೊತ್ತಾಗದಿದ್ದರೂ, ತಪ್ಪು ಮಾಡಿದವರನ್ನು ಬಂಧಿಸುವುದು ಖಚಿತ ಎಂದರು.

    ಬದುಕಲು ಅಡ್ಡ ದಾರಿ ಹಿಡಿಯಬೇಡಿ, ಇದರಿಂದ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೂ ತೊಂದರೆಯಾಗುತ್ತದೆ. ನಿಮ್ಮ ಚಲವಲನಗಳ ಮೇಲೆ ಸದಾ ಕಣ್ಗಾವಲು ಇರುತ್ತದೆ. ಟೆಕ್ನಾಲಜಿ ಇಂದು ಅತ್ಯಂತ ಸಮರ್ಥವಾಗಿದ್ದು, ಏನೇ ತಪ್ಪು ಮಾಡಿದರೂ ಸಿಕ್ಕಿಬೀಳುತ್ತೀರಿ. ಪಟ್ಟಿಗೆ ಸೇರಿದ 10 ವರ್ಷಗಳವರೆಗೆ ಮತ್ತೆ ಕೃತ್ಯದಲ್ಲಿ ತೊಡಗಿಲ್ಲವೆಂದಾದರೆ ಹೆಸರು ಕೈಬಿಡುಲಾಗುವುದು ಎಂದರು ತಿಳಿಸಿದರು.

    ಜೀವನ ಹಾಳಾಗುತ್ತದೆ: ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 18ನೇ ವಯಸ್ಸಿಗೆ ಕಳ್ಳತನ ಮಾಡಿ ಎಂಒಬಿ ಆಗಿರುವ 23ರ ಹರೆಯದ ಯುವಕನಿಗೆ, ಪ್ರಸ್ತುತ ವಿದ್ಯುತ್ ವಿತರಣಾ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಈಗ ನಡೆದಿರುವ ಪೊಲೀಸ್ ಪರಿಶೀಲನೆಯಲ್ಲಿ ಆತನ ಹೆಸರು ಕೈ ಬಿಡದಿದ್ದರೆ ನೌಕರಿ ಸಿಗದು. ಆದ್ದರಿಂದ ಯುವಜನರು ಅಪರಾಧ ಎಸಗುವುದು, ಮುಷ್ಕರಗಳ ವೇಳೆ ದಾಂಧಲೆ ನಡೆಸುವುದು ಸಲ್ಲದು ಎಂದರು.

    ಜಿಲ್ಲೆಯ ಚಳ್ಳಕೆರೆ ಹಾಗೂ ಹಿರಿಯೂರು ಉಪವಿಭಾಗಳಲ್ಲೂ ಎಂಒಬಿಗಳ ಪರೇಡ್ ನಡೆಯಲಿದೆ. ಪ್ರತಿಯೊಬ್ಬರ ಈಗಿನ ಭಾವ ಚಿತ್ರ, ಫೋನ್ ನಂ, ಗುರುತು ಚೀಟಿ, ಕುಟುಂಬ ಸದಸ್ಯರ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

    ಎಎಸ್‌ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿ ಪಾಂಡುರಂಗ, ಗ್ರಾಮಾಂತರ ಸಿಪಿಐ ಗಿರೀಶ್, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್, ನಯೀಂ ಅಹಮ್ಮದ್ ಮತ್ತಿತರರು ಇತರರಿದ್ದರು.

    ಗೈರಾದವರನ್ನು ಕರೆಸಲಾಗುವುದು: ಚಿತ್ರದುರ್ಗ ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಚಿತ್ರದುರ್ಗ ನಗರ, ಗ್ರಾಮಾಂತರ, ಬಡಾವಣೆ, ಹೊಳಲ್ಕೆರೆ, ಚಿತ್ರಹಳ್ಳಿಗೇಟ್, ಚಿಕ್ಕಜಾಜೂರು, ತುರುವನೂರು ಹಾಗೂ ಭರಮಸಾಗರ ಠಾಣೆಗಳ ವ್ಯಾಪ್ತಿ ಅಪರಾಧ ಹಿನ್ನೆಲೆಯುಳ್ಳ 330 ಜನರ ಪೈಕಿ, 116 ಜನರ ಪರೇಡ್ ನಡೆಯಿತು. ಪಟ್ಟಿಯಲ್ಲಿರುವವರ ಪೈಕಿ 10 ಮಂದಿ ಅಸು ನೀಗಿದ್ದರೆ, ಕೆಲವರು ಜೈಲಿನಲ್ಲಿದ್ದಾರೆ. ಗೈರಾದವರನ್ನು ಕರೆಸಲಾಗುವುದು ಎಂದು ಎಸ್ಪಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts