More

    ಕರೊನಾ ತಡೆಗೆ ಕೈ ಜೋಡಿಸಿದ ಅಗ್ನಿಶಾಮಕ ದಳ

    ಚಿತ್ರದುರ್ಗ: ಬೇಸಿಗೆಯ ಸಂದರ್ಭದಲ್ಲಿ ಅಗ್ನಿ ಅನಾಹುತಗಳನ್ನು ತಡೆಯುವ ಜತೆಗೆ ಸಮುದಾಯದ ಆರೋಗ್ಯ ರಕ್ಷಣೆಗೂ ಅಗ್ನಿಶಾಮಕ ದಳ ಮುಂದಾಗಿದೆ.

    ಕರೊನಾ ಹಿನ್ನೆಲೆಯಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯ ಸಂಸ್ಥೆಗಳ ಜತೆ ಕೈ ಜೋಡಿಸುತ್ತಿದ್ದಾರೆ.

    ಕರೊನಾ ತಡೆಗೆ ಕೀಟನಾಶಕ ಸಿಂಪಡಣೆ ಚುರುಕಾಗಬೇಕಿದೆ. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಸೀಮಿತ ಸೌಲಭ್ಯದಲ್ಲಿ ಎಲ್ಲ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದ ರಾಸಾಯನಿಕ ಸಿಂಪಡಿಸುವುದು ಕಷ್ಟ. ಹೀಗಾಗಿ ಮಾ.26ರಿಂದ ಅಗ್ನಿಶಾಮಕ ಸಿಬ್ಬಂದಿಯೂ ಸಾಥ್ ನೀಡಿದ್ದಾರೆ.

    ತಾಲೂಕಿನ ಪ್ರತಿ ಅಗ್ನಿಶಾಮಕ ಠಾಣೆಯಲ್ಲಿ 15, ಜಿಲ್ಲಾ ಕೇಂದ್ರ ಠಾಣೆಯಲ್ಲಿ 25 ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 100 ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ಇದ್ದು ಮೂಲ ಕರ್ತವ್ಯದ ಜತೆ ಪಾಳಿಯ ಮೇಲೆ ರಾಸಾಯನಿಕ ಸಿಂಪಡಣೆಗೂ ನಿಯೋಜಿಸಲಾಗುತ್ತಿದೆ.

    ಬ್ಲೀಚಿಂಗ್ ಫೌಡರ್ ಕಷ್ಟ: ಸಾವಿರಾರು ಲೀಟರ್ ಬ್ಲೀಚಿಂಗ್ ಪೌಡರ್ ಮಿಶ್ರಣ ಸಿಂಪಡಿಸುವಾಗ ಕೆಲವೊಮ್ಮೆ ವಾಹನದ ಪಂಪ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬುದನ್ನು ಗಮನಿಸಿ ಚಿತ್ರದುರ್ಗದಲ್ಲಿ ‘ಸೋಡಿಯಂ ಹೈಪೋಕ್ಲೊರೈಟ್ ಸಲ್ಯೂಶನ್-ಯುಎಸ್‌ಪಿ’ ರಾಸಾಯನಿಕ ಬಳಸಲಾಗುತ್ತಿದೆ.

    ಬಳಕೆಯ ಪ್ರಮಾಣ: ಅತ್ಯಧಿಕ ಘಾಟಿನಿಂದ ಕೂಡಿರುವ ‘ಸೋಡಿಯಂ ಹೈಪೋಕ್ಲೊರೈಟ್ ಸಲ್ಯೂಶನ್-ಯುಎಸ್‌ಪಿ’ 8 ಲೀಟರ್‌ನ್ನು 9 ಸಾವಿರ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲಾಗುತ್ತಿದೆ.

    ತಾಲೂಕು ಮಟ್ಟದಲ್ಲಿ ಬಳಕೆ: ತಾಲೂಕು ಮಟ್ಟದಲ್ಲಿ ಬ್ಲೀಚಿಂಗ್ ಪೌಡರ್ ಬಳಕೆ ಮುಂದುವರಿದಿದೆ. ಪಂಪ್ ಕಟ್ಟಿಕೊಳ್ಳದಂತೆ, ರಾತ್ರಿಯೇ ಮಿಶ್ರಣ ಸಿದ್ಧ ಪಡಿಸಲಾಗುತ್ತದೆ. ಬೆಳಗ್ಗೆ ಎರಡು ಪದರಗಳ ಬಟ್ಟೆ ಬಳಸಿ ಸೋಸಿದ ಮಿಶ್ರಣವನ್ನು ವಾಹನ ಟ್ಯಾಂಕಿಗೆ ಹಾಕಿ ಸಿಂಪಡಿಸುವ ಉಪಾಯವನ್ನು ಸಿಬ್ಬಂದಿ ಕಂಡುಕೊಂಡಿದ್ದಾರೆ.

    ವಾಹನಗಳ ನೀರಿನ ಟ್ಯಾಂಕರ್ ಸಾಮರ್ಥ್ಯ: ಜಿಲ್ಲಾ ಕೇಂದ್ರದಲ್ಲಿ 9000 ಲೀ., 16000 ಲೀ., 4500 ಲೀ. ನೀರು ಸಾಮರ್ಥ್ಯದ ತಲಾ ಒಂದೊಂದು ವಾಹನಗಳಿವೆ. ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಹೊಳಲ್ಕೆರೆ ಠಾಣೆಗಳಲ್ಲಿ 4500 ಲೀ. ಸಾಮರ್ಥ್ಯದ ತಲಾ 2 ಹಾಗೂ ಮೊಳಕಾಲ್ಮೂರಲ್ಲಿ ಒಂದು ವಾಹನವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts