More

    ಆರೋಗ್ಯ ಸಚಿವರಿದ್ದರೂ ಜಿಲ್ಲಾಸ್ಪತ್ರೆಗೆ ಅನಾರೋಗ್ಯ

    ಚಿತ್ರದುರ್ಗ: ಆರೋಗ್ಯ ಸಚಿವರೇ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದರೂ ಜಿಲ್ಲಾಸ್ಪತ್ರೆಗೆ ಬಂದಿರುವ ರೋಗವನ್ನು ಏಕೆ ಸರಿಪಡಿಸಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ.

    2018 ಡಿಸೆಂಬರ್ 21 ರಂದು ಪ್ರಭಾರ ಎಸ್ಪಿ ಕೆ.ಸಿ.ಪುರುಷೋತ್ತಮ್ ನೇತೃತ್ವದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು. ಅಶುಚಿ, ಕೆಲವೆಡೆ ಬೇರು ಬಿಟ್ಟಿರುವ ವೈದ್ಯ-ಸಿಬ್ಬಂದಿ, ಶುದ್ಧ ಕುಡಿವ ನೀರಿಗೆ ತತ್ವಾರ, ಸೆಕ್ಯೂರಿಟಿ ಕೊರತೆ, ಲಂಚದ ಹಾವಳಿ… ಮತ್ತಿತರ ಸಮಸ್ಯೆಗಳ ಕುರಿತಂತೆ ಲೋಕಾಯುಕ್ತರಿಗೆ ವರದಿ ಸಲ್ಲಿಸಿತ್ತು.

    ಇದಕ್ಕೆ ಲೋಕಾಯುಕ್ತರು ವಿವರಣೆ ಕೇಳಿದಾಗ, ನವೀಕರಣಕ್ಕೆ ಬರೆಯಲಾಗಿದೆ, ವೈದ್ಯರಿಲ್ಲ, ಸಿಬ್ಬಂದಿ ಕೊರತೆ, ದುಬಾರಿ ಉಪಕರಣಗಳು ಇರುವ ಕಾರಣ ಕೆಲ ವಿಭಾಗಗಳ ಕೊಠಡಿಗಳಿಗೆ ಬೀಗ ಹಾಕಲಾಗಿದೆ ಎಂಬ ಉತ್ತರಗಳನ್ನು ಆಗ ಸಂಬಂಧಿಸಿದವರು ಕೊಟ್ಟಿದ್ದರು.

    ಈ ಉತ್ತರಗಳಿಗೆ ಅತೃಪ್ತಿ ವ್ಯಕ್ತಪಡಿಸಿದ ಲೋಕಾಯುಕ್ತ ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಡಿಎಚ್‌ಒ ಹಾಗೂ ಜಿಲ್ಲಾ ಸರ್ಜನ್‌ಗೆ 2019 ಮೇನಲ್ಲಿ ಸಮನ್ಸ್ ನೀಡಿದ್ದಾರೆಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

    ಮರೀಚಿಕೆ: ಲೋಕಾಯುಕ್ತ ಪೊಲೀಸರ ಪರಿಶೀಲನೆ ಬಳಿಕ ಅವರ ಎಡಿಜಿಪಿ ಎ.ಎಸ್.ಎನ್. ಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಹಾಗೂ ಜನಪ್ರತಿನಿಧಿಗಳು ಆಸ್ಪತ್ರೆಗೆ ಕಾಲದಿಂದ ಕಾಲಕ್ಕೆ ಭೇಟಿ ನೀಡಿದ್ದರೂ ಸುಧಾರಣೆ ಮರೀಚಿಕೆ ಆಗಿದೆ. ಈ ಹಿಂದೆ ಇಲ್ಲಿಯ ವಾಸ್ತವ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮುಂದೂಡಿದ್ದರು. ಈಗ ಗುರುವಾರ ಆಸ್ಪತ್ರೆಗೆ ಭೇಟಿ ನೀಡುವ ಅಥವಾ ವಾಸ್ತವ್ಯ ಹೂಡುವ ಸಾಧ್ಯತೆ ಹೆಚ್ಚಿದೆ.

    ಡಿಸಿಗೆ ದೂರು: ಇತ್ತೀಚೆಗೆ ಡಿಸಿ ಆಸ್ಪತ್ರೆಯಲ್ಲಿ ಸಾರ್ವಜನಿಕ ಕುಂದುಕೊರತೆ ಆಲಿಸಿದ್ದ ಸಂದರ್ಭದಲ್ಲಿ ಲಂಚದ ಹಾವಳಿ ದೂರು ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ಸಾಧ್ಯವಾಗುತ್ತಿಲ್ಲ, ಸಿಟಿ ಸ್ಕಾೃನ್ ಕೆಟ್ಟು ನಾಲ್ಕೈದು ತಿಂಗಳಾಗಿದ್ದರೂ ಇನ್ನೂ ದುರಸ್ತಿಯಾಗಿಲ್ಲ.

    ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು: ಲಂಚದ ಹಾವಳಿ: ಹೆರಿಗೆ ವಾರ್ಡ್‌ನಲ್ಲಿ ನಾಲ್ಕೈದು ಸಾವಿರ ರೂ. ಲಂಚ ಕೊಡಬೇಕು, ಸ್ಪೆಷಲ್ ವಾರ್ಡ್‌ನಲ್ಲೂ ಅಧಿಕ ಹಣ ತೆರುವಂತಾಗಿದೆ. ಅಪೌಷ್ಟಿಕ ಮಕ್ಕಳ ವಾರ್ಡ್‌ಗೆ ಅಡ್ಮಿಟ್ ಆಗುವ ಮಕ್ಕಳ ಪಾಲಕರಿಗೆ 15 ದಿನಗಳವರೆಗೆ ದಿನಕ್ಕೆ 230 ರೂ. ಕೊಡುವ ಕುರಿತು ಸೂಕ್ತ ತಿಳಿವಳಿಕೆ ನೀಡುತ್ತಿಲ್ಲ.

    ಸೆಕ್ಯೂರಿಟಿ ಕೊರತೆ: ಜನದಟ್ಟಣೆ ಇದ್ದರೂ ಸೆಕ್ಯೂರಿಟಿ ವ್ಯವಸ್ಥೆ ಇಲ್ಲ. ಇಎನ್‌ಟಿ, ಡೆಂಟಲ್ ಮತ್ತಿತರ ವಿಭಾಗಗಳಲ್ಲಿರುವ ವೈದ್ಯ, ಸಿಬ್ಬಂದಿ ಅನೇಕ ವರ್ಷಗಳಿಂದ ಇದ್ದಾರೆ. ಪ್ರಯೋಗಾಲಯ, ತಾಯಿ ಮಗು ಆಸ್ಪತ್ರೆ, ಮೆಡಿಕಲ್ ಒಪಿಡಿ, ಸರ್ಜಿಕಲ್ ಒಪಿಡಿ, ಫಿಜಿಯೋ ಥೆರಪಿ, ಮಾನಸಿಕ ರೋಗ, ತುರ್ತು ನಿಗಾ ಘಟಕ, ಸುಟ್ಟಗಾಯದ ಚಿಕಿತ್ಸೆ, ಸಾಂಕ್ರಾಮಿಕ ರೋಗ, ಯೂರಾಲಿಜಿ ಮೊದಲಾದ ವಿಭಾಗಗಳ ಸಮಸ್ಯೆಗಳು ಹಾಗೂ ಔಷಧ ಕೊರತೆ ಕುರಿತಂತೆ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಲಾಗಿತ್ತು.

    ಚಿತ್ರದುರ್ಗ ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಹೇಳಿಕೆ: ಸಮಸ್ಯೆಗಳನ್ನು ನಿವಾರಿಸುವಂತೆ ಲೋಕಾಯುಕ್ತ ಪೊಲೀಸರು ಜಿಲ್ಲಾಸರ್ಜನ್‌ಗೆ ಹಾಗೂ ಮೇಲುಸ್ತುವಾರಿಗೆ ನನಗೆ ಸೂಚಿಸಿದ್ದರೂ ಸಮನ್ಸ್ ವಿಚಾರ ಗೊತ್ತಿಲ್ಲ.

    ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ ಹೇಳಿಕೆ: ಲೋಕಾಯುಕ್ತ ಪೊಲೀಸರು ಗುರುತಿಸಿದ ಅನೇಕ ಸಮಸ್ಯೆಗಳಿಗೆ ಶೇ.90 ಪರಿಹಾರ ಕಲ್ಪಿಸಲಾಗಿದೆ. ಆದರೆ, ನಮಗೆ ಸಮನ್ಸ್ ಕೊಟ್ಟಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts