More

    ಅಪ್ಪರ್ ಭದ್ರಾದಡಿ ತ್ವರಿತ ಭೂಸ್ವಾಧೀನ

    ಚಿತ್ರದುರ್ಗ: ಅಪ್ಪರ್ ಭದ್ರಾ ಯೋನೆಯಡಿ ತುಮಕೂರು, ಚಿತ್ರದುರ್ಗ ಶಾಖಾ ಕಾಲುವೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಯೋಜನೆಯ ಪ್ರಗತಿ ಪರಿಶೀಲಿಸಿ ಮಾತನಾಡಿದರು.

    ಅಜ್ಜಂಪುರ ಬಳಿಯ ವೈ ಜಂಕ್ಷನ್‌ನಿಂದ 0-150 ಕಿ.ಮೀ. ತುಮಕೂರು ಶಾಖಾ ಕಾಲುವೆ ಮತ್ತು 0-135 ಕಿ.ಮೀ.ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಆಗಬೇಕಿದೆ. ಚಿತ್ರದುರ್ಗ ಕಾಲುವೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

    ವಿವಿಧ ಇಲಾಖೆಗಳ ಜಂಟಿ ಅಳತೆ ಬಾಕಿ ಇದೆ. ಮರಡಿ ದೇವಿಗೆರೆ ಹಾಗೂ ಚಿಕ್ಕಸಿದ್ದವ್ವನಹಳ್ಳಿಗಳಲ್ಲಿ ಪುನರ್ವಸತಿ, ಪುನರ್ ನಿರ್ಮಾಣ ಕುರಿತ ಸಭೆ ಆಗಬೇಕಿದ್ದು,ಜುಲೈ ಮೊದಲ ವಾರ ನಡೆಸಬೇಕು ಎಂದರು.

    ತುಮಕೂರು ಶಾಖಾ ಕಾಲುವೆಗೆ ಗರಗದಲ್ಲಿ 71ಎಕರೆ, ಮೈಲಾಪುರ-27ಎಕರೆ, ಗೋಗುದ್ದು-25 ಹಾಗೂ ಕಬ್ಬಿನಕೆರೆ-7 ಎಕರೆ ಸೇರಿ 130 ಎಕರೆಗೆ 11(1)ಪ್ರಾಥಮಿಕ ಅಧಿಸೂಚನೆ ಬಾಕಿ ಇದೆ.

    ಎರಡೂ ಶಾಖಾ ಕಾಲುವೆಗಳಲ್ಲಿ ಕೆಲವೆಡೆ ಅರಣ್ಯ ಭೂಮಿ, ಸರ್ಕಾರಿ ಸರ್ವೆ ನಂಬರ್ ದಾಖಲೆ ಹಾಗೂ ಭೂ ಮಾಲೀಕತ್ವ,ಮೌಲ್ಯಮಾಪನದಲ್ಲಿ ತೊಂದರೆಗಳಿವೆ. ಸಮಸ್ಯೆ ಪರಿಹರಿಸಿ ಕಡತಗಳನ್ನು ಡಿಸಿ ಕಚೇರಿಗೆ ಕಳುಹಿಸಬೇಕು. ಭೂಮಿ ಅಥವಾ ಆಸ್ತಿ ಮೌಲ್ಯಮಾಪನ ಸಂದರ್ಭದಲ್ಲಿ ಕಾಮಗಾರಿಗೂ ಮುನ್ನ ಪೊಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ರೈತರಿಗೆ ಅನ್ಯಾಯವಾಗಬಾರದು. ಅವಾರ್ಡ್ ಪ್ರಕರಣಗಳಲ್ಲಿ ರೈತರಿಗೆ ಕೂಡಲೇ ಹಣ ಪಾವತಿಸ ಬೇಕೆಂದರು.

    ಭೂದಾಖಲೆಗಳ ಉಪನಿರ್ದೇಶಕ ಕೃಷ್ಣಪ್ರಸಾದ್,ಸಹಾಯಕ ನಿರ್ದೇಶಕ ಎಲ್.ಪ್ರಸಾದ್, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಇದ್ದರು.

    ಅಧಿಕಾರಿಗಳಿಗೆ ತರಾಟೆ: ಭೂ ಒತ್ತುವರಿ ವಿವಾದ ಬಗೆಹರಿಸದೆ ಭೂಸ್ವಾಧೀನಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಕಡತಗಳನ್ನು ಸಲ್ಲಿಸುವುದರಿಂದ ಪ್ರಯೋಜನವಾಗದು. ಇದರಿಂದ ಡಿಸಿ ಕಚೇರಿಯಲ್ಲಿ ಕಡತಗಳು ವಿಳಂಬವಾಗುತ್ತಿವೆ ಎಂಬ ಆರೋಪವನ್ನು ನಾವು ವಿನಾ ಕಾರಣ ಎದುರಿಸಬೇಕಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಎಡಿಸಿ ತರಾಟೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts