

ಮುಂಬೈ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ ಆರಂಭಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ನೇಮಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಇತ್ತ ರೋಹಿತ್ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ಮೆಂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿದ ತಂಡದ ಮ್ಯಾನೇಜ್ಮೆಂಟ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಈ ಕುರಿತು ಫ್ರಾಂಚೈಸಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಕುರಿತು ಮುಂಬೈ ಇಂಡಿಯನ್ಸ್ ಪ್ರತಿಕ್ರಿಯಿಸಿದೆ ಎಂದು ತಿಳಿದು ಬಂದಿದೆ. ನಿನ್ನೆ (ಡಿಸೆಂಬರ್ 19) ನಡೆದ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ವೇಳೆ ಅಭಿಮಾನಿಯೊಬ್ಬರು ಈ ಬಗ್ಗೆ ಆಕಾಶ್ ಅವರ ಬಳಿ ಕೇಳಿದ್ದು, ಅವರು ಉತ್ತರಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿಯೊಬ್ಬರು ರೋಹಿತ್ ಶರ್ಮಾರನ್ನು ನೀವು ನಾಯಕತ್ವದಿಂದ ಯಾಕೆ ಕೆಳಗಿಳಿಸಿದ್ದೀರಾ ಎಂದು ಜೋರಾಗಿ ಕೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆಕಾಶ್ ಚಿಂತಿಸಬೇಡಿ ಅವರು ಬ್ಯಾಟಿಂಗ್ ಮಾಡುತ್ತಾರೆ ಎಂದು ಹೇಳುವ ಮೂಲಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆಯುತ್ತಾರೆ ಎಂಬ ವದಂತಿಗೆ ಬ್ರೇಕ್ ಹಾಕಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಿತ್ತು ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿ ಹೇಳಿಲ್ಲ.
ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ 30 ವಿದೇಶಿಯರ ಸಹಿತ ಒಟ್ಟು 72 ಆಟಗಾರರು ಮಾರಾಟವಾದರು. ಈ ಪೈಕಿ ಮುಂಬೈ ಇಂಡಿಯನ್ಸ್ ಗೆರಾಲ್ಡ್ ಕೋಟ್ಜೀ (5 ಕೋಟಿ), ದಿಲ್ಶಾನ್ ಮಧುಶಂಕ (4.60 ಕೋಟಿ), ಮೊಹಮದ್ ನಬಿ (1.50 ಕೋಟಿ), ಶ್ರೇಯಸ್ ಗೋಪಾಲ್ (20 ಲಕ್ಷ), ನುವಾನ್ ತುಷಾರ (4.80 ಕೋಟಿ), ಆಂಶುಲ್ ಕಂಬೋಜ್ (20 ಲಕ್ಷ), ನಮನ್ ಧೀರ್ (20 ಲಕ್ಷ), ಶಿವಾಲಿಕ್ ಶರ್ಮ (20 ಲಕ್ಷ) 8 ಆಟಗಾರರನ್ನು ಖರೀದಿಸುವ ಮೂಲಕ ಖಾತೆಯಲ್ಲಿ 1.05 ಕೋಟಿ ರೂಪಾಯಿ ಮೊತ್ತವನ್ನು ಉಳಿಸಿಕೊಂಡಿದೆ.