More

    ಲಡಾಖ್​ ಬಿಕ್ಕಟ್ಟನ್ನು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಗೆ ತಳಕು ಹಾಕಿದ ಚೀನಾ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದ್ದೇ ಲಡಾಖ್​ ಬಿಕ್ಕಟ್ಟಿಗೆ ಕಾರಣ ಎಂದು ಚೀನಾ ಹೇಳಿದೆ.

    ಪಾಕಿಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿಯಲ್ಲಿ ವಕ್ತಾರರಾಗಿರುವ ಚೀನಾದ ವ್ಯಾಂಗ್​ ಕ್ಸಿಯಾಂಗ್​ಫ್ಯಾಂಗ್​ ಎಂಬುವರು ಈ ಬಗ್ಗೆ ಟ್ವೀಟ್​ ಮಾಡಿದ್ದು, 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವಾಗಿಯೂ, ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಯೂ ಘೋಷಿಸಿ ಭಾರತ ಮಾಡಿದ ತಪ್ಪಿಗಾಗಿ ಲಡಾಖ್​ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದ್ದಾರೆ.

    ಕಾಶ್ಮೀರದ ಸ್ಥಾನಮಾನ ಬದಲಾಗಿದ್ದೇ ಗಡಿಯಲ್ಲಿನ ಉದ್ವಿಗ್ನತೆಗೆ ಕಾರಣ ಎಂಬ ಅರ್ಥದಲ್ಲಿ ಚೀನಾದ ಆಂತರಿಕ ಭದ್ರತೆ ಅಥವಾ ಮುಖ್ಯವಾದ ಬೇಹುಗಾರಿಕಾ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಬರೆದಿದ್ದಾರೆ ಎನ್ನಲಾದ ಲೇಖನವನ್ನೂ ಅವರು ತಮ್ಮ ಟ್ವೀಟ್​ಗೆ ಲಗತ್ತಿಸಿದ್ದಾರೆ.

    ಕಾಶ್ಮೀರದಲ್ಲಿ ಭಾರತ ಏಕಪಕ್ಷೀಯವಾಗಿ ಕೆಲವೊಂದು ನಿರ್ಣಯಗಳನ್ನು ಜಾರಿಗೊಳಿಸಿದೆ. ಇದರಿಂದ ಪ್ರಾದೇಶಿಕ ಶಾಂತಿಗೆ ಧಕ್ಕೆಯುಂಟಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡುವಂತಿದೆ. ಇದರಿಂದಾಗಿ ಭಾರತ-ಪಾಕಿಸ್ತಾನ ಮತ್ತು ಚೀನಾ-ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಜಟಿಲಗೊಂಡಿದೆ ಎಂದು ವ್ಯಾಂಗ್​ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್​ !

    ಬಹುಶಃ ಇದು ವ್ಯಾಂಗ್​ ಅವರ ವೈಯಕ್ತಿಕ ಅಭಿಪ್ರಾಯ ಇದ್ದಿರಬಹುದು ಎಂದು ಭಾವಿಸಲಾಗುತ್ತಿದೆ. ಆದರೂ, ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಗೆ ಕಾಶ್ಮೀರದ ಸ್ಥಾನಮಾನ ಬದಲಿಸುವ ಕೇಂದ್ರ ಸರ್ಕಾರದ ನಿರ್ಧಾರ ಕಾರಣ ಎಂದು ಚೀನಾದ ಅಧಿಕಾರಿಯೊಬ್ಬರು ಅಧಿಕೃತವಾಗಿ ನೀಡಿರುವ ಹೇಳಿಕೆ ಇದಾಗಿರುವುದು ಗಮನಾರ್ಹವಾಗಿದೆ.

    ಕಳೆದ ವರ್ಷದ ಆಗಸ್ಟ್​ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಚೀನಾದ ವಿದೇಶಾಂಗ ಸಚಿವಾಲಯ ಭಾರತದ ಕ್ರಮವನ್ನು ಖಂಡಿಸಿತ್ತು.

    ಈ ವಿದ್ಯಮಾನದ ನಂತರದಲ್ಲಿ ಭಾರತ ಗಡಿ ವಿಷಯವಾಗಿ ತುಂಬಾ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಅದರ ಈ ನಿರ್ಧಾರದಿಂದ ಗಡಿ ವಿವಾದ ಮತ್ತಷ್ಟು ಜಟಿಲಗೊಂಡಿದೆ. ನಮ್ಮ ಹಿಡಿತದಲ್ಲಿರುವ ಪ್ರದೇಶಗಳನ್ನು ಭಾರತದ ಆಡಳಿತಾತ್ಮಕ ವ್ಯಾಪ್ತಿಗೆ ಸೇರಿಸಿಕೊಳ್ಳುವುದು ತಪ್ಪಾಗುತ್ತದೆ ಎಂದು ಚೀನಾ-ಭಾರತದ ಪಶ್ಚಿಮ ಭಾಗದ ಗಡಿ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಎಚ್ಚರಿಕೆಯನ್ನೂ ನೀಡಿತ್ತು.
    ಅದುವೇ ಲಡಾಖ್​ ಪ್ರದೇಶವಾಗಿದ್ದು, ಈ ಪ್ರದೇಶ ತನ್ನದು ಎಂದು ಭಾರತ ಹೇಳುತ್ತಿದೆ. ಆದರೆ ಇದು ತನ್ನದೆಂದು ಚೀನಾ ಪ್ರತಿಪಾದಿಸುತ್ತಿದೆ.

    ನಾಲ್ಕಂತಸ್ತಿನ ಕಟ್ಟಡಕ್ಕೆ ಮುಳುವಾಯ್ತು ನೀರಾವರಿ ಕಾಲುವೆ ಕಾಮಗಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts