More

    ಖಾಲಿ ಬಿದ್ದಿವೆ ಚೆಕ್‌ಪೋಸ್ಟ್‌ಗಳು

    ಉಡುಪಿ: ಮರಳು ಸಾಗಾಟ ವಾಹನ ಮತ್ತು ಅಕ್ರಮ ಚಟುವಟಿಕೆ ಬಗ್ಗೆ ನಿಗಾ ವಹಿಸಲು ಹಿರಿಯಡ್ಕ ವ್ಯಾಪ್ತಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳು ಪ್ರಸ್ತುತ ಖಾಲಿ ಬಿದ್ದಿವೆ.

    ಕಳೆದ ವರ್ಷ ಬೇಸಿಗೆಯಲ್ಲಿ ಹಿರಿಯಡ್ಕದಲ್ಲಿ ಸ್ವರ್ಣ ನದಿಯ ಬಜೆ ಡ್ಯಾಂನಿಂದ ಹೂಳೆತ್ತಿ ಮರಳು ಸಂಗ್ರಹಿಸಿ ಬೊಮ್ಮರಬೆಟ್ಟು ಗ್ರಾಪಂ ಮೈದಾನದ ತಾತ್ಕಾಲಿಕ ದಾಸ್ತಾನು ಕೇಂದ್ರದಲ್ಲಿ 2200 ಮೆಟ್ರಿಕ್ ಟನ್ ಮರಳು ಶೇಖರಿಸಿಡಲಾಗಿತ್ತು. ಈ ಮರಳು ಅಕ್ರಮ ಸಾಗಾಟ ಆಗಬಾರದು ಎಂದು ಸಾವಿರಾರು ರೂ. ವ್ಯಯಿಸಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಮರಳುಗಾರಿಕೆ ಇಲ್ಲದೆ ಚೆಕ್‌ಪೋಸ್ಟ್‌ಗಳು ಖಾಲಿಯಾಗಿವೆ. ಮರಳುಗಾರಿಕೆ ಚಟುವಟಿಕೆ ಇದ್ದಾಗಲೂ ಚೆಕ್‌ಪೋಸ್ಟ್ ಖಾಲಿ ಬಿದ್ದಿತ್ತು ಎನ್ನುತ್ತಾರೆ ಸ್ಥಳೀಯರು.

    ನಾಲ್ಕು ಶೆಡ್‌ಗಳ ನಿರ್ಮಾಣ: ಮರಳು ದಾಸ್ತಾನು ಕೇಂದ್ರದಲ್ಲಿ ಮೈದಾನ ಸುತ್ತಲೂ ತಂತಿ ಬೇಲಿ, ಐದು ಸಿಸಿ ಕ್ಯಾಮರಾ, ಜಿಯೋ ಫೆನ್ಸಿಂಗ್ ಅಳವಡಿಸಲಾಗಿದೆ. ಮರಳು ಸಾಗಾಟ ಬಗ್ಗೆ ನಿಗಾ ವಹಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪುತ್ತಿಗೆ ಸೇತುವೆ ಬಳಿ, ಹಿರಿಯಡ್ಕ ಕೋಟ್ನಕಟ್ಟೆ, ಕುಕ್ಕೆಹಳ್ಳಿ -ಬಜೆ ಡ್ಯಾಂ ಕ್ರಾಸ್ ಬಳಿ, ಹಿರಿಯಡ್ಕ ದೇವಾಡಿಗರ ಸಭಾಭವನದ ಬಳಿ ಚೆಕ್‌ಪೋಸ್ಟ್ ನಿರ್ಮಿಸಿತ್ತು. ಇದಕ್ಕೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಮತ್ತು ಉಪಕರಣಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಈ ಹಿಂದೆ ತಿಳಿಸಿದ್ದರು.
    ಸದ್ಯ ಚೆಕ್‌ಪೋಸ್ಟ್‌ಗಳಿಗೆ ಬೀಗ ಜಡಿದು ಹಲವು ತಿಂಗಳು ಕಳೆದಿವೆ. ಕೆಲವು ಶೆಡ್‌ಗಳ ಸುತ್ತಮುತ್ತ ಗಿಡಗಳು ಬೆಳೆದಿವೆ. ಮಳೆಗಾಲದಲ್ಲಿ ತಡರಾತ್ರಿವರೆಗೂ ಕುಡುಕರು ಶೆಡ್‌ಗಳ ಬದಿ ಮದ್ಯ ಸೇವನೆಯಲ್ಲಿ ತೊಡಗಿಕೊಂಡಿರುತ್ತಾರೆ. ಶೆಡ್‌ಗಳು ಅಕ್ರಮ ಚಟುವಟಿಕೆಗೆ ಬಳಕೆಯಾಗದಂತೆ, ನಿರುಪಯುಕ್ತವಾಗದಂತೆ ಜಿಲ್ಲಾಡಳಿತ, ಗಣಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

    ಮರಳು ಸಾಗಾಟ ವಾಹನಗಳ ಮೇಲೆ ನಿಗಾ ಇರಿಸುವ ಸಲುವಾಗಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಪ್ರಸಕ್ತ ಅವುಗಳು ನಿರುಪಯುಕ್ತವಾಗಿವೆ. ಮರಳು ದಾಸ್ತಾನು ಮೈದಾನದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಹಿಡಿಯಲು ಈ ಚೆಕ್‌ಪೋಸ್ಟ್ ಬಳಕೆಯಾಗಿಲ್ಲ. ಪ್ರಸಕ್ತ ಚೆಕ್‌ಪೋಸ್ಟ್ ಶೆಡ್‌ನ ಬದಿಯಲ್ಲಿ ಮದ್ಯದ ಬಾಟಲಿ, ಆಹಾರ ಪೊಟ್ಟಣ ಬಿದ್ದುಕೊಂಡಿದ್ದು, ಮದ್ಯಪಾನಿಗಳ ತಾಣವಾಗಿದೆ.
    ಗಣೇಶ್‌ರಾಜ್ ಸರಳೇಬೆಟ್ಟು ಸಾಮಾಜಿಕ ಕಾರ್ಯಕರ್ತ

    ಬಜೆಯಲ್ಲಿ ಸಂಗ್ರಹಿಸಿದ ಮರಳು ಸಾಗಾಟಕ್ಕೆ ಸಂಬಂಧಿಸಿ ನಿಗಾ ವಹಿಸಲು ಈ ಶೆಡ್ ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಈ ಶೆಡ್ ನಿರುಪಯುಕ್ತವಲ್ಲ. ಇದನ್ನು ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಬಳಸಿಕೊಳ್ಳಬಹುದು. ಈ ಶೆಡ್ ಅನ್ನು ಬೇರೊಂದು ಕಡೆಗೆ ಸ್ಥಳಾಂತರಿಸಬಹುದು.
    ಗೌತಮ್ ಶಾಸ್ತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts