More

    ಸಂತೆ ಮೈದಾನದ ಜಾಗ ಅತಿಕ್ರಮಣ ಆರೋಪ

    ಶಿಗ್ಗಾಂವಿ: ಪುರಸಭೆ ಸಂತೆ ಮೈದಾನದ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ನಿರ್ವಣಗೊಂಡಿರುವ ಧಾರ್ವಿುಕ ಕಟ್ಟಡ, ವಾಣಿಜ್ಯ ಮಳಿಗೆಗಳ ಸಂಕೀರ್ಣ ಹಾಗೂ ಮನೆಗಳನ್ನು ತೆರವುಗೊಳಿಸುವಂತೆ ಪಟ್ಟಣದ ಸಾರ್ವಜನಿಕರು ತಹಸೀಲ್ದಾರ್ ಹಾಗೂ ಪುರಸಭೆಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ.

    ಪಟ್ಟಣದ ಮಧ್ಯಭಾಗ ಮತ್ತು ಪುರಸಭೆ ಎದುರಿಗಿರುವ ಸಂತೆ ಮೈದಾನದ ಒಂದು ಭಾಗದ ಸವಣೂರ-ಶಿಗ್ಗಾಂವಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸೈಯದ್ ಮಹ್ಮದ್ ಶಾ ಖಾದ್ರಿ ಹಜರತ್ ಮಹಬೂಬ ಸುಬಾನಿ ದರ್ಗಾ ನಿರ್ವಿುಸಲಾಗಿದೆ. ಇದರ ಸುತ್ತಲೂ ಮುಖ್ಯ ರಸ್ತೆಗೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯದೇ ಪುರಸಭೆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.

    ಈ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು ಎಂದು ಪಟ್ಟಣದ ಪ್ರಶಾಂತ ಬಡ್ಡಿ, ಶಿವನಗೌಡ ರಾಚನಗೌಡ್ರ, ವಿನಯ ಬಿಂದರಗಿ, ಬಿ.ಎಂ. ಕಬ್ಬೂರ, ಗುರನಗೌಡ ದುಂಡಿಗೌಡ್ರ ಸೇರಿ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

    ಹಿನ್ನೆಲೆ: ಪಟ್ಟಣದ ಮಧ್ಯಭಾಗದಲ್ಲಿನ ಸುಮಾರು 9 ಎಕರೆಗಿಂತಲೂ ಅಧಿಕ ಜಾಗವನ್ನು ಒಳಗೊಂಡಿರುವ ಸಂತೆ ಮೈದಾನ ಈ ಪೂರ್ವದಲ್ಲಿ (1945ರಿಂದ 1973) ರವರೆಗೆ ಸರ್ಕಾರಿ ಧ್ವಜ ಮೈದಾನವಾಗಿತ್ತು. ಇದರ ಪಕ್ಕದಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೈದಾನದ ಒಂದು ದಂಡೆಯಲ್ಲಿ ಸಣ್ಣ ಜಂಡಾ ಕಟ್ಟಿ (ಮಹಬೂಬ ಸುಬಾನಿ ಮಕಾನ) ಇದ್ದ ಬಗ್ಗೆ ಸರ್ಕಾರಿ ದಾಖಲಾತಿಗಳಿಂದ ತಿಳಿದು ಬಂದಿದೆ.

    ನಂತರದ ದಿನಗಳಲ್ಲಿ ಈ ಜಂಡಾ ಕಟ್ಟಿಯ ಉಸ್ತುವಾರಿ ಮಾಡುತ್ತಿದ್ದ ಕುಟುಂಬಗಳು ಸುತ್ತಲಿನ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ವಾಸವಾಗಿದ್ದರು. ನಂತರ ಇವರ ವಂಶಸ್ಥರು 1982-83ರಿಂದ ಹಂತ ಹಂತವಾಗಿ ಸಾರ್ವಜನಿಕ ಜಾಗದಲ್ಲಿ ಮನೆ, ವಾಣಿಜ್ಯ ಸಂಕೀರ್ಣಗಳನ್ನು ನಿರ್ವಿುಸಿಕೊಂಡಿದ್ದಾರೆ. ದರ್ಗಾ ಸೇರಿ ಇಲ್ಲಿರುವ ಎಲ್ಲ ಕಟ್ಟಡಗಳಿಗೆ ಇದುವರೆಗೂ ಪುರಸಭೆಯಿಂದ ಯಾವುದೇ ಆಸ್ತಿಯ ಹಸ್ತಾಂತರವಾಗಿಲ್ಲ. ಮಕಾನ (ದರ್ಗಾ) ಎನ್ನುವ ಸಾರ್ವಜನಿಕ ದೇವಸ್ಥಾನ ಹೆಸರಿನಲ್ಲಿ ಅನಧಿಕೃತ ವಾಸವಾಗಿದ್ದಲ್ಲದೇ, ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಿಕೊಂಡು ಸಂತೆ ಮೈದಾನದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂಬ ಚರ್ಚೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

    ಸಂತೆ ಮೈದಾನ ಅತಿಕ್ರಮದ ಕುರಿತು ಪುರಸಭೆಯ ದಾಖಲಾತಿ ಪಡೆದು ಪರಿಶೀಲನೆ ಮಾಡಲಾಗುವುದು. ಅತಿಕ್ರಮವಾಗಿದ್ದರೆ ಕೂಡಲೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

    | ಪ್ರಕಾಶ ಕುದರಿ , ತಹಸೀಲ್ದಾರ್ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts