More

    ದೇಶದ ಆರ್ಥಿಕತೆಗೆ ಕೃಷಿ ಕೊಡುಗೆ ಅಪಾರ

    ಚನ್ನರಾಯಪಟ್ಟಣ: ವಿದ್ಯೆ ಕಲಿತವರಿಗೆಲ್ಲ ಉದ್ಯೋಗ ಲಭಿಸದು. ದೇಶದಲ್ಲಿ ಶೇ.30ರಷ್ಟು ಮಾತ್ರ ಉದ್ಯೋಗ ಸಾಧ್ಯ, ಶೇ.70ರಷ್ಟು ಉದ್ಯೋಗ ಕೃಷಿ ಕ್ಷೇತ್ರವನ್ನೇ ಅವಲಂಬಿಸಿದೆ. ದೇಶದ ಆರ್ಥಿಕ ಪ್ರಗತಿಗೆ ಕೃಷಿ ಪ್ರಮುಖ ಕಾರಣ ಎಂದು ಜಿಲ್ಲಾ ಕೃಷಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಬೆಕ್ಕ ಹೇಳಿದರು.

    ಪಟ್ಟಣದ ಬಿಜಿಎಸ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಮತ್ತು ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮದು ಕೃಷಿ ಪ್ರಧಾನ ದೇಶ, ಶೇ.80ರಷ್ಟು ಕೃಷಿಯನ್ನೇ ಅವಲಂಬಿತವಾಗಿದೆ. ದೇಶದ ಆರ್ಥಿಕತೆಗೆ ಕೃಷಿ ಪ್ರಮುಖ ಕೊಡುಗೆಯಾಗಿದೆ ಎಂದರು.

    ರೈತ ದೇಶದ ಬೆನ್ನೆಲೆಬು. ಆತನನ್ನು ಕಳೆದುಕೊಂಡರೆ ದೇಶ ಬರಡು. ರೈತರನ್ನು ನೆನೆಯುವ ದಿನ ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿದಿನ ನೆನೆಯಬೇಕು. ಇಂದಿನ ಯುವಕರು ಕೃಷಿಯಲ್ಲಿ ತೊಡಗಲು ಸಂಕೋಚ ಮನೋಭಾವ ಹೊಂದಿದ್ದಾರೆ. ಕೃಷಿ ಮಾಡುವುದು ಅವಮಾನ ಎನಿಸಿದೆ. ಹಸು, ಕರು ಹಿಡಿದುಕೊಂಡು ಹೋಗಲು ಹಿಂಜರಿಯುವ ಜನ, ನಾಯಿ ಹಿಡಿದು ಸಾಗುವುದು ಮೇಲು ಎನ್ನುವಂತಾಗಿದೆ. ಇನ್ನೊಂದೆಡೆ ಮಳೆ ಕೊರತೆ, ರಾಸಾಯನಿಕ ಬಳಕೆಯಿಂದ ಭೂಮಿ ಮತ್ತು ಮನುಷ್ಯನ ದೇಹದ ಪ್ರತಿರೋಧಕ ಶಕ್ತಿ ಕ್ಷೀಣಿಸಿದೆ ಎಂದರು.

    ಮಕ್ಕಳು ತಮ್ಮ ತಂದೆ-ತಾಯಿ ಜತೆಗೆ ಕೆಲ ಹೊತ್ತು ಕೃಷಿ ಕಾರ್ಯದಲ್ಲಿ ತೊಡಗಿದರೆ ಬುದ್ಧಿಶಕ್ತಿ ಚುರುಕಾಗುತ್ತದೆ. ರೈತರು ತಮ್ಮ ಮಕ್ಕಳು ತಮ್ಮಂತೆ ಕೃಷಿಕರಾಗುವುದು ಬೇಡ ಎಂಬ ನಿಲುವು ಬಿಡಬೇಕು. ಕೃಷಿ ಕಲಿತವನು ಎಲ್ಲಿ ಬೇಕಾದರೂ ಬದುಕುವ ಸಾಮರ್ಥ್ಯ ಹೊಂದುತ್ತಾನೆ. ಸ್ವಾವಲಂಬಿ ಬದುಕು ಕೃಷಿಯಿಂದ ಮಾತ್ರ ಸಾಧ್ಯ ಎಂದರು.

    ಬಿಜಿಎಸ್ ಸೌಹಾರ್ದ ಸಂಘದ ಅಧ್ಯಕ್ಷ ಮಧುಸೂದನ್ ಮಾತನಾಡಿ, ನಗರಿಕರಣದ ಪ್ರಭಾವದಿಂದ ಆಹಾರ ಕೊರತೆ ಎದುರಿಸುತ್ತಿದ್ದೇವೆ. ಕೆಲ ಕೃಷಿಕರು ಆಹಾರ ಬೆಳೆ ಬೆಳೆಯದೇ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದು ಕಾರಣವಾಗಿದೆ. ನಗರಕ್ಕೆ ವಲಸೆ ಹೋಗುವ ರೈತರನ್ನು ಹಳ್ಳಿಗಳಲ್ಲೇ ಉಳಿಸುವ ಕೆಲಸ ಸರ್ಕಾರದಿಂದಾಗಬೇಕು. ಈ ನಿಟ್ಟಿನಲ್ಲಿ ಕಾನೂನು ಜಾರಿಯಾಗಬೇಕು ಎಂದರು.

    ಬಿಜಿಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಕುಮಾರ್ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದ ಕಾರಣ ಕೃಷಿ ವೈಫಲ್ಯ ಕಾಣುತ್ತಿದೆ. ಸರ್ಕಾರಗಳು ಪುಗ್ಸಟ್ಟೆ ಯೋಜನೆಗಳ ಬದಲಾಗಿ ಆ ಹಣವನ್ನೇ ರೈತರ ಬೆಳೆಗೆ ಮೀಸಲಿಟ್ಟರೆ ಕೃಷಿ ಕ್ಷೇತ್ರ ಪ್ರಗತಿ ಕಾಣಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts