More

    ಚನ್ನಪಿಳ್ಳೇಕೊಪ್ಪಲು ಮುರಾರ್ಜಿ ಶಾಲೆಯಲ್ಲಿಲ್ಲ ಮೂಲಸೌಕರ್ಯ

    ಮಳವಳ್ಳಿ: ತಾಲೂಕಿನ ಕಿರುಗಾವಲು ಹೋಬಳಿಯ ಚನ್ನಪಿಳ್ಳೇಕೊಪ್ಪಲು ಬಳಿ ಇರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಮೂಲಸೌಕರ್ಯಗಳು ಇಲ್ಲದೇ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

    ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಇಲ್ಲಿನ ವಸತಿ ಶಾಲೆ ಕಟ್ಟಡವನ್ನು 2002ರಲ್ಲಿ 250 ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ವಸತಿ ಸೌಲಭ್ಯಕ್ಕೆ ನಿರ್ಮಾಣ ಮಾಡಲಾಯಿತು. ಪ್ರಸ್ತುತ ಗ್ರಾಮೀಣ ಪ್ರದೇಶದ 247 ವಿದ್ಯಾರ್ಥಿ, ವಿದ್ಯಾರ್ಥಿನಿಯರು 6 ರಿಂದ 10 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ.

    ಆರು ಎಕರೆ ವ್ಯಾಪ್ತಿಯಲ್ಲಿರುವ ವಸತಿ ಶಾಲೆಯ ಕ್ಯಾಂಪಸ್‌ನಲ್ಲಿ ಶಾಲಾ ಕೊಠಡಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ, ಭೋಜನಾಲಯ ಮತ್ತು ಶಿಕ್ಷಕರಿಗಾಗಿ 12 ಕ್ವಾಟ್ರರ್ಸ್, ವಿಶಾಲವಾದ ಆಟದ ಮೈದಾನವಿದೆ. ಸತತ ಎಂಟು ವರ್ಷಗಳಿಂದ ವಸತಿ ಶಾಲೆಯು ಶೇ.100 ರಷ್ಟು ಫಲಿತಾಂಶ ಪಡೆಯುತ್ತಿದೆ.

    ಸರ್ಕಾರ ಮಕ್ಕಳ ಶಿಕ್ಷಣ ಮತ್ತು ವಸತಿ ಶಾಲೆಗಳ ಅಭ್ಯುದಯಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆಯಾದರೂ ಇಲ್ಲಿನ ಶಾಲೆಯಲ್ಲಿ ಮಾತ್ರ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಶೌಚಗೃಹಗಳಲ್ಲಿ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಶೌಚಗೃಹಗಳ ಬಾಗಿಲು ಮುರಿದಿವೆ. ಸ್ನಾನದ ಕೊಠಡಿಗಳಿಗೆ ಬಾಗಿಲಿದ್ದರೂ ಚಿಲಕವಿಲ್ಲ.. ಚಿಲಕವಿದ್ದರೆ ತಾಳಿಲ್ಲ ಎಂಬ ಸ್ಥಿತಿಯಲ್ಲಿವೆ. ಕಿಟಕಿಗಳಿಗೆ ಅಳವಡಿಸಿರುವ ಗ್ಲಾಸ್‌ಗಳು ಒಡೆದು ಹೋಗಿವೆ. ಪರಿಣಾಮ

    ಮಳೆ-ಗಾಳಿ ಹಾಗೂ ಚಳಿಗಾಲದಲ್ಲಿ ಕಿಟಕಿಗಳಿಗೆ ಪ್ಲಾಸ್ಟಿಕ್ ಚೀಲ ಮತ್ತು ಪೇಪರ್ ಅಂಟಿಸಿಕೊಂಡು ಮಕ್ಕಳು ರಕ್ಷಣೆ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.
    ಇಲ್ಲಿ ವಸತಿಗೃಹ ಸುಸ್ಥಿತಿಯಲ್ಲಿದ್ದರೂ ಬಹಳಷ್ಟು ಶಿಕ್ಷಕರು ವಸತಿಗೃಹಗಳು ಬಳಕೆಗೆ ಯೋಗ್ಯವಿಲ್ಲವೆಂಬ ನೆಪ ಹೇಳಿ ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ ಎಂಬುದು ಪಾಲಕರ ಆರೋಪ. ಇಲ್ಲಿರುವ 12 ಮನೆಗಳ ಪೈಕಿ 3ರಲ್ಲಿ ಮಾತ್ರ ಸ್ಟಾಫ್ ನರ್ಸ್, ಒಂದಿಬ್ಬರು ಶಿಕ್ಷಕರು ವಾಸವಿದ್ದು, ಅಡುಗೆ ಸಿಬ್ಬಂದಿ ಮಕ್ಕಳ ವಸತಿ ಶಾಲೆಗಳಲ್ಲಿ ಮಲಗುತ್ತಾರೆ. ರಾತ್ರಿ ವೇಳೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಯಾರು ಹೊಣೆ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ.
    ಅವಘಡ ಸಂಭಂವಿಸುವ ಮುನ್ನ ಮೇಲಧಿಕಾರಿಗಳು ವಸತಿ ಶಾಲೆಯ ಸಮಸ್ಯೆಗಳ ನಿವಾರಣೆಗ ಕ್ರಮ ವಹಿಸುವ ಮೂಲಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಒತ್ತು ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಪಾಲಕರ ಆರೋಪವೇನು ?: ನಿಯಮ ಪ್ರಕಾರ ವಸತಿ ಶಾಲೆಗಳ ಕ್ಯಾಂಪಸ್‌ಗಳಲ್ಲೇ ಪ್ರಾಂಶುಪಾಲ ಸೇರಿದಂತೆ ಪಠ್ಯ ಮತ್ತು ಪಠ್ಯೇತರ ಸಿಬ್ಬಂದಿ ವಾಸ ಮಾಡಬೇಕು. ಇದಕ್ಕಾಗಿ ಸರ್ಕಾರದಿಂದ ಇವರಿಗೆ ವಿಶೇಷ ಭತ್ಯೆ ನೀಡಲಾಗುತ್ತದೆ. ಆದರೆ ಇಲ್ಲಿ ಪ್ರಾಂಶುಪಾಲ ಸೇರಿದಂತೆ ಬಹಳಷ್ಟು ಕಾಯಂ ನೌಕರರು ವಾಸ ಮಾಡುತ್ತಿಲ್ಲ. ಪ್ರಾಂಶುಪಾಲ ಮುರಳೀಧರ್ ಅವರ ಕರ್ತವ್ಯದ ಮೂಲ ಸ್ಥಾನ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ. ಇಲ್ಲಿನ ಪಾಂಶುಪಾಲ ಶಿವಕುಮಾರ್ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆಲಸ ಮಾಡಬೇಕು. ಆದರೆ ಇವರು ತಮ್ಮ ಅನುಕೂಲಕ್ಕಾಗಿ ಮೇಲಧಿಕಾರಿಗಳಿಂದ ನಿಯೋಜನೆ ಆದೇಶ ಮಾಡಿಸಿಕೊಂಡು ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಇನ್ನು ಶೌಚಗೃಗಳಲ್ಲಿ ಸ್ವಚ್ಛತೆ ಇಲ್ಲ. ಬಾಗಿಲುಗಳು ದುಸ್ಥಿತಿಯಲ್ಲಿವೆ. ಕಿಟಕಿ ಗ್ಲಾಸ್‌ಗಳು ಒಡೆದಿದ್ದು, ಚಳಿ ಮತ್ತು ಮಳೆಗಾಲದಲ್ಲಿ ರಕ್ಷಣೆಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಷ್ಟಾದರೂ ಸಂಬಂಧಪಟ್ಟವರು ಯಾವುದೇ ಕ್ರಮ ವಹಿಸುತ್ತಿಲ್ಲ ಎಂಬುದು ಹೆಸರು ಹೇಳಲಿಚ್ಛಿಸದ ಪಾಲಕರು ಆರೋಪ.

    ಶಾಲೆಯಲ್ಲಿನ ಶೌಚಗೃಹ ಮತ್ತು ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ವಹಿಸಲಾಗಿದೆ. ಕಿಟಕಿ-ಗಾಜು ಸೇರಿದಂತೆ ದೊಡ್ಡ ಮಟ್ಟದ ದುರಸ್ತಿ ಕೆಲಸಗಳಿಗೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಿಸಲಾಗುವುದು. ವಸತಿಗೃಹಗಳು ವಾಸಕ್ಕೆ ಯೋಗ್ಯವಿಲ್ಲದ ಹಿನ್ನೆಲೆಯಲ್ಲಿ ಕೆಲವು ನೌಕರರು ವಾಸವಿಲ್ಲ. ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಕ್ಯಾಂಪಸ್ ಇದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿ ಕ್ರಮ ವಹಿಸಲಾಗಿದೆ. ಮಕ್ಕಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಪಾಲಕರು ನೇರವಾಗಿ ಬಂದು ಮಾಹಿತಿ ನೀಡಿದರೆ ಸರಿಪಡಿಸಲಾಗುವುದು.
    ಮುರಳೀಧರ್ ಪ್ರಾಂಶುಪಾಲ, ಮುರಾರ್ಜಿ ದೇಸಾಯಿ ವಸತಿ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts