More

    ಚನ್ನಪಟ್ಟಣದ ಬೊಂಬೆ ಉದ್ಯಮ ಪುನಶ್ಚೇತನದ ಆಶಾಭಾವ

    ರಾಮನಗರ: ಪ್ರತಿ ಬಾರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವ ಚನ್ನಪಟ್ಟಣ ಬೊಂಬೆಗಳು ಈಗ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಮೂಲಕ ಮುನ್ನೆಲೆಗೆ ಬಂದಿವೆ.

    ತಮ್ಮ 68ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಸ್ಥಳೀಯ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾತನಾಡುತ್ತ ಚನ್ನಪಟ್ಟಣದ ಆಟಿಕೆ ಉದ್ಯಮದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರೊಂದಿಗೆ ಚೀನಾ ಹೊಡೆತಕ್ಕೆ ನಲುಗಿ ಹೋಗಿರುವ ಬೊಂಬೆ ಉದ್ಯಮಕ್ಕೆ ಪುನಶ್ಚೇತನ ದೊರೆಯುವ ಆಶಾ ಭಾವನೆ ಹುಟ್ಟಿಕೊಂಡಿದೆ.

    ಪ್ರತಿ ಬಾರಿ ಉತ್ಸಾಹ: ಚನ್ನಪಟ್ಟಣ ಬೊಂಬೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಪತ್ನಿ ಬೊಂಬೆ ಖರೀದಿ ಮಾಡಿದಾಗ ಹೊಸ ಸಂಚಲನ ಉಂಟುಮಾಡಿತ್ತು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಚನ್ನಪಟ್ಟಣ ಬೊಂಬೆ ಸ್ತಬ್ಧಚಿತ್ರಕ್ಕೆ ಸ್ಥಾನ ದೊರೆತಾಗ ಉದ್ದಿಮೆದಾರರದಲ್ಲಿ ಹೊಸ ಭರವಸೆ ಮೂಡಿತ್ತು. ಇದರ ಜತೆಗೆ ಕರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಮಕ್ಕಳಿಗೆ ಚನ್ನಪಟ್ಟಣದ ಬೊಂಬೆಗಳನ್ನು ನೀಡುವ ಟ್ವೀಟ್ ಅನ್ನು ರೈಲ್ವೆ ಇಲಾಖೆ ಮಾಡಿದಾಗಲೂ ಉದ್ಯಮ ಪುಟಿದೇಳುತ್ತದೆ ಎನ್ನುವ ಖುಷಿಯನ್ನು ಉದ್ದಿಮೆದಾರರು ವ್ಯಕ್ತಪಡಿಸಿದರು. ಇದೀಗ ನರೇಂದ್ರ ಮೋದಿ ಅವರೇ ಮನ್ ಕೀ ಬಾತ್ ನಲ್ಲಿ ಚನ್ನಪಟ್ಟಣದ ಬೊಂಬೆಯ ಬಗ್ಗೆ ಪ್ರಸ್ತಾಪಿಸಿರುವುದು ಉದ್ದಿಮೆದಾರರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎನ್ನುವ ಸೂಚನೆ ನೀಡಿದೆ.

    ಬೇಕಿದೆ ಉತ್ತೇಜನ: ಚನ್ನಪಟ್ಟಣ ತಾಲೂಕಿನಲ್ಲಿ ತಯಾರಾಗುವ ಮಕ್ಕಳ ಆಟಿಕೆ ವಸ್ತುಗಳು ಹಾಗೂ ಬೊಂಬೆಗಳಿಗೆ ಈ ಹಿಂದೆ ಭಾರಿ ಬೇಡಿಕೆ ಇತ್ತು. ಚೀನಾ ದೇಶದ ಅಗ್ಗದ ಆಟಿಕೆ ವಸ್ತುಗಳು ದೇಶದ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೇಲೆ ಇಲ್ಲಿನ ಬೊಂಬೆ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಚೀನಾದ ಆಟಿಕೆ ಹೊರತಾಗಿಯೂ ತಾಲೂಕಿನ ಬೊಂಬೆ ಉದ್ಯಮ ವಾರ್ಷಿಕ ಸುಮಾರು 150-200 ಕೋಟಿ ರೂ.ವಹಿವಾಟು ನಡೆಸುತ್ತಿತ್ತು. ಚೀನಾ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಇಲ್ಲಿನ ಬೊಂಬೆ ಉದ್ಯಮದಲ್ಲಿ ಕೊಂಚ ಆಶಾಭಾವ ಮೂಡುವಂತಾಗಿದೆ. ಒಂದು ವೇಳೆ ಸರ್ಕಾರ ದಿಟ್ಟ ನಿರ್ಧಾರ ಪ್ರದರ್ಶಿಸಿದ್ದೇ ಆದರೆ, ತಾಲೂಕಿನಲ್ಲಿರುವ ಸುಮಾರು 3 ಸಾವಿರಕ್ಕೂ ಹೆಚ್ಚು ಬೊಂಬೆ ತಯಾರಿಸುವ ಹಾಗೂ ಪರೋಕ್ಷವಾಗಿ ಈ ಉದ್ಯಮವನ್ನೇ ಅವಲಂಬಿಸಿರುವ ದೇಶದ ಸಾವಿರಾರು ಕುಟುಂಬಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತವೆ.

    ಚನ್ನಪಟ್ಟಣಕ್ಕೆ ಸೀಮಿತವಲ್ಲ: ಬೊಂಬೆ ಉದ್ಯಮ ಚನ್ನಪಟ್ಟಣಕ್ಕೆ ಸೀಮಿತವಲ್ಲ. ಚನ್ನಪಟ್ಟಣದ ಬೊಂಬೆಗೆ ಸ್ಥಳೀಯವಾಗಿ ಬೆಳೆಯುವ ಆಲೆ ಮರಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಅಂತಿಮ ಸ್ಪರ್ಶ ನೀಡುವ ಅರಗು, ದೂರದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ರವಾನೆ ಆಗುತ್ತದೆ. ಇನ್ನು ಇದಕ್ಕೆ ಬಳಕೆ ಆಗುವ ಬಣ್ಣವೂ ಸಹ ಪರಿಸರ ಸ್ನೇಹಿ. ಇದನ್ನು ಸ್ಥಳಿಯವಾಗಿ ಮತ್ತು ಹೊರಗಿನಿಂದ ಖರೀದಿ ಮಾಡಲಾಗುತ್ತದೆ. ಮಾರುಕಟ್ಟೆ ವ್ಯವಸ್ಥೆ ದೇಸೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಇದೆ. ಯೂರೋಪ್ ದೇಶಗಳು, ಅಮೆರಿಕ ಸೇರಿದಂತೆ ಹಲವಾರು ದೇಶಗಳಿಗೆ ರ‌್ತಾಗುತ್ತದೆ. ಮುಂಬೈನ ಮಧ್ಯವರ್ತಿಗಳ ಮೂಲಕ ಈ ರ್ತು ಕಾರ್ಯ ನಡೆಯುತ್ತದೆ.

    ಸರ್ಕಾರ ಹಿಂದಿನಿಂದಲೂ ಬೊಂಬೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಅವುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ವಿಲವಾಗಿರುವ ಕಾರಣ ಯೋಜನೆಗಳು ಯಶಸ್ವಿಯಾಗಿಲ್ಲ. ದೇಶದ ಪ್ರತಿ ರಾಜ್ಯದಲ್ಲೂ ಚನ್ನಪಟ್ಟಣದ ಬೊಂಬೆ ಮಾರಾಟ ಮಳಿಗೆ ಆರಂಭಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದಾಗಿ ಎಲ್ಲವೂ ಮುಚ್ಚಿವೆ. ಅಲ್ಲದೆ, ಉದ್ಯೋಗ ಭದ್ರತೆ ಹಾಗೂ ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗದ ಕಾರಣ ಸಾಕಷ್ಟು ಮಂದಿ ಈ ಕ್ಷೇತ್ರದಿಂದಲೇ ದೂರ ಸರಿದಿದ್ದಾರೆ.

     

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಬೊಂಬೆಗಳ ಬಗ್ಗೆ ಪ್ರಸ್ತಾಪ ಮಾಡಿರುವುದು ಇಲ್ಲಿನ ಬೊಂಬೆಗಳ ಶ್ರೇಷ್ಠತೆಯನ್ನು ಪ್ರತಿಬಿಂಬಿಸಿದೆ. ಈಗಲಾದರೂ ಸರ್ಕಾರಗಳು ಅಗತ್ಯ ನೆರವು ನೀಡುವ ಮೂಲಕ ಕ್ಷೇತ್ರದ ಬೆಳವಣಿಗೆಗೆ ಮುಂದಾಗಬೇಕು.
    ವೆಂಕಟೇಶ್, ಬೊಂಬೆ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts