More

    ಚನ್ನಕೇಶವ ಸ್ವಾಮಿ ರಥೋತ್ಸವ ಅದ್ದೂರಿ

    ಚಿತ್ರದುರ್ಗ: ಕೆಳಗೋಟೆಯ ಸಿ.ಕೆ.ಪುರ ಬಡಾವಣೆಯಲ್ಲಿರುವ ಚನ್ನಕೇಶವ ಸ್ವಾಮಿ ಮಹಾರಥೋತ್ಸವ ಶ್ರೀದೇವಿ, ಭೂದೇವಿ ಸಹಿತ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.

    ಶ್ರೀದೇವಿ, ಭೂದೇವಿ ಮತ್ತು ಚನ್ನಕೇಶವ ಸ್ವಾಮಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ನಂತರ ಮಂಗಳವಾದ್ಯಗಳೊಂದಿಗೆ ರಥದ ಬಳಿಗೆ ಕರೆತಂದು ಅದರೊಳಗೆ ಪ್ರತಿಷ್ಠಾಪಿಸಲಾಯಿತು. ರಥದ ಸುತ್ತಲೂ ಹೂವಿನ ಹಾರಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಭಕ್ತಗಣ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು.

    ರಥ ಮುಂದೆ ಸಾಗಿದ್ದೆ ತಡ ದಾಸಯ್ಯಗಳು ಗಂಟೆ, ಜಾಗಟೆ, ಶಂಖನಾದ ಮೊಳಗಿಸಿದರು. ರಥೋತ್ಸವ ಕಣ್ತುಂಬಿಕೊಂಡ ಭಕ್ತರು ಮಂಡಕ್ಕಿ, ಪುಷ್ಪವನ್ನು ರಥಕ್ಕೆ ಎಸೆದು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಕೆಳಗೋಟೆ, ಸಿ.ಕೆ.ಪುರ ಬಡಾವಣೆ, ಆಕಾಶವಾಣಿ ಸೇರಿ ಸುತ್ತಮುತ್ತಲಿನ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.

    ಶನಿವಾರ ದೇಗುಲದಲ್ಲಿ ಬೆಳಗ್ಗೆಯಿಂದಲೇ ಅಂಕುರಾರ್ಪಣ, ಗಂಗಾ ಪೂಜೆ, ಧ್ವಜಾರೋಹಣ, ಕಳಶ ಸ್ಥಾಪನೆ, ನವಗ್ರಹ ಪೂಜೆ, ವಾಸ್ತು ಶಾಂತಿ ಮತ್ತು ರಾಕ್ಷೋಘ್ನ ಹೋಮ ಸೇರಿ ಇತರೆ ಪೂಜಾ ಕೈಂಕರ್ಯ ನೆರವೇರಿದವು.

    ನಂತರ ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ ದೇಗುಲದಿಂದ ಆರಂಭವಾಗಿ ಕೆಳಗೋಟೆ, ಕೆಎಸ್‌ಆರ್‌ಟಿಸಿ ಹಳೆ ಬಸ್ ಡಿಪೊ, ಅಂಬಾಭವಾನಿ ದೇಗುಲ ಮಾರ್ಗ ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಾ ದೇಗುಲ ತಲುಪಿತು. ಸ್ವಾಮಿಯ ಕಲ್ಯಾಣೋತ್ಸವ ಹಾಗೂ ಉಯ್ಯಲೋತ್ಸವದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts