More

    ಎರಡೆಕರೆ ಜಮೀನಿನಲ್ಲಿ ಎರಡರಷ್ಟು ಆದಾಯ ಕಂಡ ಮಾಚನಾಯಕನಹಳ್ಳಿ ರೈತ

    ಚನ್ನಗಿರಿ: ಇರೋದು ಎರಡೆಕರೆ ಜಮೀನು. ಅಷ್ಟರಲ್ಲೇ ವಾಣಿಜ್ಯ ಬೆಳೆ, ನಡುವೆ ಅಂತರ ಬೆಳೆ ಬೆಳೆಯುತ್ತ ಹಂಗಿಲ್ಲದ ಅರಮನೆಯಲ್ಲಿ ಸುಖಿ ಜೀವನ ನಡೆಸುತ್ತಿದೆ ಇಲ್ಲೊಂದು ಕೃಷಿ ಕುಟುಂಬ. ಮೊದಮೊದಲು ಕಷ್ಟ ಎದುರಿಸಿದ ಕುಟುಂಬ ನಂತರ ಸಮಗ್ರ ಕೃಷಿ ಪದ್ಧತಿಯಲ್ಲಿ ತೊಡಗಿ ಬದುಕನ್ನೂ ಸಮೃದ್ಧಿಯಾಗಿಸಿಕೊಂಡಿದ್ದಾರೆ.

    ಚನ್ನಗಿರಿ ತಾಲೂಕು ಮಾಚನಾಯಕನಹಳ್ಳಿ ಗ್ರಾಮದ ಸಿ.ನಿಜಲಿಂಗಪ್ಪ ಮತ್ತು ನೇತ್ರಾವತಿ ದಂಪತಿ ಸಮಗ್ರ ಕೃಷಿ ಪದ್ಧತಿಯಿಂದ ಜೀವನ ನಿರ್ವಹಣೆ ಜತೆಗೆ ಸಾಧನೆಯ ಹಾದಿ ಹಿಡಿದಿದ್ದಾರೆ.

    ಅಡಕೆ ಜತೆಗೆ ಕಾಳುಮೆಣಸು, ಎಲೆಬಳ್ಳಿ, ಕೋಕಾ, ಕಾಫಿ ಹೀಗೆ ಬಹುತೇಕ ವಾಣಿಜ್ಯ ಬೆಳೆಗಳನ್ನೇ ಅಂತರ ಬೆಳೆಯಾಗಿ ಬೆಳೆದು ಸಾಫಲ್ಯ ಕಂಡಿದ್ದಾರೆ. ಮೊದಲು ಅಡಕೆ ಸಸಿ ನೆಟ್ಟ ದಂಪತಿ, ಸಸಿಗಳು ಬೆಳೆದು ನಿಲ್ಲುವಷ್ಟರಲ್ಲಿ ಅಂತರ ಬೆಳೆಯಾಗಿ ಬಾಳೆ, ಕೋಕಾ, ತರಕಾರಿ ಬೆಳೆದರು. ಈಗ ಅಡಕೆ ಮರ ಬೆಳೆದಿದ್ದರಿಂದ ಮರಕ್ಕೆ ಕಾಳು ಮೆಣಸು, ಎಲೆ ಬಳ್ಳಿ ಹಬ್ಬಿಸಿ ಆದಾಯ ದ್ವಿಗುಣ ಮಾಡಿಕೊಂಡಿದ್ದಾರೆ. ಕೋಕಾ, ಕಾಫಿ, ಬಾಳೆಯಿಂದ ಲಾಭವನ್ನು ಖರ್ಚು-ವೆಚ್ಚಕ್ಕೆ ಮೀಸಲಿಡುತ್ತಿದ್ದಾರೆ.

    ತೋಟದಲ್ಲಿ ಕೊಳವೆಬಾವಿ ನೀರು ಕೈ ಕೊಟ್ಟಾಗ 2 ಮಳೆ ಕೊಯ್ಲು ಘಟಕ ಅಳವಡಿಸಿ, ತೋಟಕ್ಕೆ ನೀರಿನ ಸೌಲಭ್ಯ ಕಂಡುಕೊಂಡಿದ್ದಾರೆ. ಚನ್ನಗಿರಿ ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯಂತೆ ಶಿವಮೊಗ್ಗ ಜಿಲ್ಲೆ ಸಾಗರದ ಸಹ್ಯಾದ್ರಿ ನರ್ಸರಿಯಲ್ಲಿ 500 ಕಾಳು ಮೆಣಸು ಸಸಿ ತಂದು ನೆಟ್ಟರು. ಮೊದಲ ವರ್ಷ 20 ಕೆಜಿ ಫಸಲು ಬಂತು. ಈ ವರ್ಷ 1.5 ಕ್ವಿಂ. ಇಳುವರಿ ಪಡೆಯುವ ನಿರೀಕ್ಷೆ ಹೊಂದಿದ್ದಾರೆ.

    ಎಲೆ ಬಳ್ಳಿ ಬೆಳೆಸಿ ಪ್ರತಿವಾರ ಎಲೆ ಮಾರಾಟ ಮಾಡುತ್ತಾರೆ. ಅಲ್ಲದೇ, 150 ಕೋಕಾ ಸಸಿ ಬೆಳೆಸಿದ್ದು ಇದರಿಂದ 20 ಕೆಜಿ ಇಳುವರಿ ಪಡೆಯುತ್ತಿದ್ದಾರೆ. ಚಿಕ್ಕಮಗಳೂರಿನಿಂದ ಕಾಫಿ ಗಿಡ ತಂದು ಬೆಳೆಸಿದ್ದು, 25 ಕೆಜಿ ಫಸಲು ತೆಗೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಕಾಂಪೋಸ್ಟ್ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.

    ಅಡಕೆ ಸಸಿಗೆ ಮೊದಮೊದಲು ನೀರಿಲ್ಲದೆ ತೊಂದರೆ ಅನುಭವಿಸಿದೆವು. ಬಡ್ಡಿಯಂತೆ ಹಣ ಪಡೆದು ಕೊಳವೆ ಬಾವಿ ಕೊರೆಸಿದರೆ ಸಮರ್ಪಕ ನೀರು ಸಿಗಲಿಲ್ಲ. ಚಿತ್ರದುರ್ಗದ ಅಂತರ್ಜಲ ತಜ್ಞ ದೇವರಾಜ ರೆಡ್ಡಿ ಅವರ ಸಲಹೆಯಂತೆ ಮಳೆ ಕೊಯ್ಲು ಅಳವಡಿಸಿಕೊಂಡೆ. ಅಂತರ ಬೆಳೆ ಬೆಳೆದು ಆದಾಯ ಹೆಚ್ಚಿಸಿಕೊಂಡಿದ್ದೇವೆ.
    -ಸಿ.ನಿಜಲಿಂಗಪ್ಪ ರೈತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts