More

    ಚನ್ನಗಿರಿಗೆ ಇರಲಿ ಕಂದಾಯ ತಾಲೂಕಿನ ಸೌಲಭ್ಯ; ಕಲಾಪ ಬಹಿಷ್ಕರಿಸಿದ ವಕೀಲರು

    ಚನ್ನಗಿರಿ: ಕಂದಾಯ ತಾಲೂಕನ್ನು ಹೊನ್ನಾಳಿ ಉಪವಿಭಾಗಕ್ಕೆ ಸೇರಿಸುವ ಬಗ್ಗೆ ಹೊರಡಿಸಿರುವ ಪ್ರಾಸ್ತಾವಿಕ ಅಧಿಸೂಚನೆ ರದ್ದುಪಡಿಸುವಂತೆ ಒತ್ತಾಯಿಸಿ ವಕೀಲರು ಕಲಾಪ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಕೋರ್ಟ್ ಆವರಣದಿಂದ ಮೌನ ಮೆರವಣಿಗೆ ಆರಂಭಿಸಿದ ವಕೀಲರು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

    ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಜಿ. ಶಿವಾನಂದ ಮಾತನಾಡಿ, ಜಿಲ್ಲೆಯಲ್ಲಿ ಚನ್ನಗಿರಿ ದೊಡ್ಡ ತಾಲೂಕಾಗಿದೆ. 61 ಗ್ರಾಪಂ ಹಾಗೂ ಇಬ್ಬರು ಶಾಸಕರನ್ನು ಹೊಂದಿದೆ. 3.10 ಲಕ್ಷ ಜನಸಂಖ್ಯೆ ಹೊಂದಿರುವ ಚನ್ನಗಿರಿ ತಾಲೂಕಿನ ಕಂದಾಯ ವಸೂಲಿ ಅಧಿಕಾರವನ್ನು ಹೊನ್ನಾಳಿಗೆ ವರ್ಗಾಯಿಸುವ ಕ್ರಮ ಸರಿಯಲ್ಲ. ಇದರಿಂದ ಜನರಿಗೆ ತೊಂದರೆ ಆಗಲಿದೆ. ಬಸ್ ಸೌಕರ್ಯ ಇಲ್ಲದೇ ಸಣ್ಣಪುಟ್ಟ ಕಾರ್ಯಕ್ಕೆ ಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಕಂದಾಯ ತಾಲೂಕನ್ನು ಚನ್ನಗಿರಿಯಲ್ಲೇ ಉಳಿಸಬೇಕು ಎಂದು ಆಗ್ರಹಿಸಿದರು.

    ಹೊನ್ನಾಳಿ ಮತ್ತು ನ್ಯಾಮತಿ ಎರಡು ತಾಲೂಕುಗಳನ್ನು ಸೇರಿಸಿದರೂ ಕಂದಾಯ ಗ್ರಾಮಗಳ ಸಂಖ್ಯೆ 154 ದಾಟುವುದಿಲ್ಲ. ಆದರೆ, ಚನ್ನಗಿರಿ ತಾಲೂಕಿನಲ್ಲಿ 250 ಕಂದಾಯ ಗ್ರಾಮಗಳಿವೆ. ಹರಿಹರ, ಹೊನ್ನಾಳಿ, ನ್ಯಾಮತಿ ತಾಲೂಕುಗಳನ್ನು ಸೇರಿಸಿ ಉಪವಿಭಾಗ ರಚಿಸಲು ಮೊದಲೇ ನಿರ್ಧಾರ ಮಾಡಲಾಗಿತ್ತು. ಈಗ ನಿರ್ಧಾರ ಬದಲಿಸಿರುವುದು ಖಂಡನೀಯ. ಇದನ್ನು ಕೂಡಲೇ ಕೈಬಿಡದಿದ್ದರೆ ಜ.31ರಂದು ತಾಲೂಕು ಕಚೇರಿ ಎದುರು ನಿರಶನ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಸಂಘದ ಉಪಾಧ್ಯಕ್ಷ ಬಿ.ಆರ್. ಮಹೇಂದ್ರ ಮೂರ್ತಿ, ಸಹ ಕಾರ್ಯದರ್ಶಿ ಜಗದೀಶ್, ಜಿ.ಎಸ್. ಮೋಹನ್, ವೈ.ಡಿ. ಸುರೇಶ್, ಜಯದೇವ, ದಯಾನಂದ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts