More

    ಖಾಸಗಿ ರೆಸಾರ್ಟ್‌ಗೆ ನೀಡಿದ ಅನುಮತಿ ಆದಿವಾಸಿಗಳಿಗಿಲ್ಲ

    ಚಾಮರಾಜನಗರ: ಗೋಪಿನಾಥಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡಲಾಗಿದ್ದು, ಪಾಲಾರ್ ಆದಿವಾಸಿ ಬಡಾವಣೆಯ ನಿವಾಸಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಅರಣ್ಯವಾಸಿ ಸೇವಾಟ್ರಸ್ಟ್ ಕಾರ್ಯಾಧ್ಯಕ್ಷ ನಾಗೇಂದ್ರ ಆರೋಪಿಸಿದರು.

    ಮಹದೇಶ್ವರ ಬೆಟ್ಟದ ಪಾಲಾರ್‌ನಲ್ಲಿ ಸುಮಾರು 80 ಆದಿವಾಸಿ ಕುಂಟುಂಬಗಳು ವಾಸ ಮಾಡುತ್ತಿದ್ದು, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇಂದಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. 50 ಕಿ.ಮೀ ದೂರದಿಂದ ವಿದ್ಯುತ್ ಸಂಪರ್ಕ ಪಡೆಯಲು ಅರಣ್ಯ ಇಲಾಖೆ ಅವಕಾಶ ಮಾಡಿಕೊಡುತ್ತಿಲ್ಲ. ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

    ಪಾಲಾರ್‌ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, 50 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ಅದಲ್ಲದೇ ಅಂಗನವಾಡಿ ಕೇಂದ್ರವಿದ್ದು, ಕರೆಂಟ್ ಇಲ್ಲದ ಕಾರಣದಿಂದ ಮಕ್ಕಳ ಓದಿಗೆ ಸಮಸ್ಯೆಯಾಗುತ್ತಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಸೆಸ್ಕ್ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಅನುಮತಿ ನೀಡುತ್ತಿಲ್ಲ ಎಂದರು.

    ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಭಯದಿಂದ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಆದರೆ ನಮಗೆ ಆಸೌಲಭ್ಯವೇ ದೊರೆಯುತ್ತಿಲ್ಲ. ಹಾಡಿಗಳಿಗೆ ಮೂಲಸೌಕರ್ಯ ಒದಗಿಸದೇ ಇದ್ದಲ್ಲಿ ನಮಗೆ ಚುನಾವಣೆಯ ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ಏ.1 ರಂದು ಕೊಳ್ಳೇಗಾಲ ಡಿಎ್ಓ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಗಳಲ್ಲೂ ಚುನಾವಣೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಗೋಷ್ಠಿಯಲ್ಲಿ ಮುಖಂಡ ಮಹದೇವ, ಮಧು, ಗಿರೀಶ್, ಮುರುಗೇಶ್ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts