More

    ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ


    ರಸ್ತೆಗಳು ಜಲಾವೃತ ವಾಹನ ಸವಾರರ ಪರದಾಟ

    ಚಾಮರಾಜನಗರ: ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರವಾಗಿ ಮಳೆ ಸುರಿಯಿತು.
    ನಗರ ಸೇರಿ ಕೊಳ್ಳೇಗಾಲ, ಹನೂರು, ಯಳಂದೂರಿನ ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚು ಮಳೆಯಾಗಿದ್ದು, ಗುಂಡ್ಲುಪೇಟೆ ಸುತ್ತಮುತ್ತ ಸಾಧಾರಣ ಮಳೆಯಾಗಿದೆ.
    ನಗರದಲ್ಲಿ ಮಧ್ಯಾಹ್ನ ಸುಮಾರು 2.30ಕ್ಕೆ ಪ್ರಾರಂಭವಾದ ಮಳೆ 1 ತಾಸಿಗೂ ಹೆಚ್ಚು ಸುರಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಮಳೆಯಿಂದ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡಿದರು. ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಚರಂಡಿ ಹದಗೆಟ್ಟಿರುವ ಕಾರಣ ಕೊಳಚೆ ಸಹಿತ ಮಳೆ ನೀರು ರಸ್ತೆಯಲ್ಲಿ ಹರಿಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಶ್ರೀಭುವನೇಶ್ವರಿ ವೃತ್ತದ ಬಳಿಯ ರಸ್ತೆ ಜಲಾವೃತವಾಗಿತ್ತು.
    ನಗರದಲ್ಲಿ 28 ಮಿ.ಮೀ. ಮಳೆಯಾಗಿದ್ದು, ತಾಲೂಕಿನ ಮಾನಸಪುರದಲ್ಲಿ 61 ಮಿ.ಮೀ, ಹೊಂಗನೂರಿನಲ್ಲಿ 56 ಮಿ.ಮೀ, ಇರಸವಾಡಿಯಲ್ಲಿ 53 ಮಿ.ಮೀ. ಗೂಳಿಪುರದಲ್ಲಿ 51 ಮಿ.ಮೀ. ಮಳೆಯಾಗಿದೆ. ಕೊಳ್ಳೇಗಾಲದಲ್ಲಿ 20 ಮಿ.ಮೀ., ಹರಳೆ ಗ್ರಾಮದಲ್ಲಿ 45 ಮಿ.ಮೀ., ಮನಗಳ್ಳಿಯಲ್ಲಿ 36 ಮಿ.ಮೀ. ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ 27.5 ಮಿ.ಮೀ. ಮಳೆ ಸುರಿದಿದೆ.
    ಇಳೆಗೆ ತಂಪೆರೆದ ಮಳೆ: ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದು ಇಳೆಗೆ ತಂಪೆರೆಯಿತು.
    ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ಹಾಗೂ ರಾತ್ರಿ ತಾಲೂಕಿನಾದ್ಯಂತ ಉತ್ತಮ ಮಳೆ ಸಿಂಚನವಾಗಿತ್ತು. ಇದೇ ರೀತಿ ಸೋಮವಾರವೂ ದಿಢೀರ್ ಮಳೆ ಆರಂಭಗೊಂಡು ರಸ್ತೆಯಲ್ಲಿ ನೀರು ಹರಿದು ಕೆಸರು ಗದ್ದೆಯಂತಾಗಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಡಕಾಯಿತು.
    ಯಳಂದೂರು ಸೇರಿ ತಾಲೂಕಿನ ವಿವಿಧೆಡೆ ಸೋಮವಾರ ಕೆಲಕಾಲ ಜಡಿ ಮಳೆ ಸುರಿಯಿತು. ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಬಂದಿದ್ದ ಜನರು ಮಳೆಗೆ ಸಿಲುಕಿ ತೊಂದರೆ ಅನುಭವಿಸಬೇಕಾಯಿತು.
    ತಾಲೂಕಿನ ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಯರಗಂಬಳ್ಳಿ, ದುಗ್ಗಹಟ್ಟಿ, ಕಂದಹಳ್ಳಿ, ಹೊನ್ನೂರು, ವೈ.ಕೆ.ಮೋಳೆ, ಅಂಬಳೆ, ಕೃಷ್ಣಾಪುರ, ಉಪ್ಪಿನಮೋಳೆ, ಮುರಟಿಪಾಳ್ಯ, ಯರಿಯೂರು ಹಾಗೂ ಯಳಂದೂರು ಸೇರಿ ಹಲವು ಕಡೆಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts