More

    ಸೋಂಕಿತರ ಸಂಪರ್ಕದಲ್ಲಿದ್ದ 56 ಜನ ಕ್ವಾರಂಟೈನ್‌ಗೆ ಶಿಫ್ಟ್

    ಚಳ್ಳಕೆರೆ: ತಾಲೂಕಿನ ಕೋಡಿಹಳ್ಳಿಯಲ್ಲಿ ಎರಡು ಕರೊನಾ ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕ ಹೊಂದಿದ್ದ 56 ಸದಸ್ಯರನ್ನು ನಗರ ಹೊರವಲಯದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಸೋಂಕು ಪ್ರಕರಣ ಪತ್ತೆಯಾದ ಬೆನ್ನಲ್ಲೇ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭಾನುವಾರ ಗ್ರಾಮಕ್ಕೆ ತೆರಳಿದರು. ಮೂರು ಕುಟುಂಬ ಮತ್ತು ಚಿಕ್ಕಹಳ್ಳಿಯ ಐದು ಕುಟುಂಬದ ಒಟ್ಟು 56 ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಿದರು.

    ಕ್ವಾರಂಟೈನ್‌ನಲ್ಲಿರುವವರ ಸಂಪರ್ಕ ಸಾಧಿಸಿದ ಕಾರಣಕ್ಕೆ ವೈದ್ಯರು, ಶುಷ್ರೂಷಕರು, ಡ್ರೈವರ್, ಗ್ರೂಪ್ ಡಿ. ನೌಕರರು ಮತ್ತು ನಾನ್ ಕ್ಲಿನಿಕ್ ಸಿಬ್ಬಂದಿ, ತಳಕು ಪೊಲೀಸ್ ಠಾಣೆ ಕೆಲ ಸಿಬ್ಬಂದಿ ಸೇರಿ 30 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಗ್ರಾಮಸ್ಥರೊಂದಿಗೆ ಅಧಿಕಾರಿಗಳ ಸಭೆ: ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ, ತಾಪಂ ಇಒ ಶ್ರೀಧರ್ ಬಾರಿಕರ್, ಟಿಎಚ್‌ಒ ಡಾ.ಎನ್. ಪ್ರೇಮಸುಧಾ ಗ್ರಾಮಸ್ಥರ ಸಭೆ ನಡೆಸಿದರು. ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ವ್ಯಾಪ್ತಿಯ ಐದು ಕಿ.ಮೀ. ವರೆಗೆ ಸೀಲ್‌ಡೌನ್ ಮಾಡಲಾಗಿದೆ. ಈ ಗ್ರಾಮಗಳ ಎಲ್ಲ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರನ್ನು ಸಂಪರ್ಕಿಸಿದ ಕಾರಣ ಕ್ವಾರಂಟೈನ್ ಮಾಡಲಾಗಿದೆ. ವರದಿ ಬಂದ ಬಳಿಕ ಇವರನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

    ಗ್ರಾಮಸ್ಥರ ಆಗ್ರಹ: ಗ್ರಾಮದಲ್ಲಿ ಶೇ.90 ರಷ್ಟು ಜನ ಕೂಲಿಯನ್ನೇ ಅವಲಂಬಿಸಿದ್ದಾರೆ. ಸೀಲ್‌ಡೌನ್‌ನಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಅಲ್ಲದೆ ಊರಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಎರಡು ಗ್ರಾಮಗಳ ಸಮಸ್ಯೆಗೆ ವಿಶೇಷ ಪ್ಯಾಕೇಜ್‌ನಡಿ ಉಚಿತವಾಗಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ಪ್ರತಿ ಕುಟುಂಬಕ್ಕೂ ವಿತರಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಎನ್.ಎಚ್. ರಾಜಣ್ಣ, ಕೋಡಿಹಳ್ಳಿ ಸೋಮಶೇಖರ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಸ್ಥಳೀಯ ಆಡಳಿತದಿಂದ ಸಮೀಕ್ಷೆ ನಡೆಸಿ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಜನರಲ್ಲಿ ಆತಂಕ: ಮೀರಾಸಾಬಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮೂಲದ 30 ಜನ ಕೆಇಬಿ ಕೆಲಸಕ್ಕೆ ಬಂದಿರುವ ಮಾಹಿತಿ ತಿಳಿದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಸುದ್ದಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಗುರುತಿನ ಚೀಟಿ ನೀಡುವ ಮೂಲಕ ರೈಲಿನಲ್ಲಿ ಮರಳಿ ಬಿಹಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts