More

    ಪಿಡಿಒ ವಿರುದ್ಧ ದೇವಿಹೊಸೂರ ಗ್ರಾಪಂ ಅಧ್ಯಕ್ಷೆ ದೂರು

    ಹಾವೇರಿ: ಪಿಡಿಒ ಹಣದಾಸೆಗೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೇವಿಹೊಸೂರ ಗ್ರಾಪಂ ಅಧ್ಯಕ್ಷೆ ರೇಣುಕಾ ಕೆಂಚಲ್ಲನವರ ಆರೋಪಿಸಿದ್ದಾರೆ.
    ಈ ಕುರಿತು ತಾಪಂ ಇಒ ಅವರಿಗೆ ದೂರು ನೀಡಿರುವ ಅವರು, ಗ್ರಾಮೀಣ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೇ ಹಣ ಸುರಿಯುತ್ತಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾತ್ರ ಮರೀಚಿಕೆಯಾಗುತ್ತಿದೆ. ಇದಕ್ಕೆ ಕಾರಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು. ನಾನು ಅಧ್ಯಕ್ಷೆಯಾಗಿ ಆಯ್ಕೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಡಿಜಿಟಲ್ ಸಹಿಗೆ ಅವಕಾಶ ಕಲ್ಪಿಸಿದ್ದಾರೆ. ಇಲ್ಲಿಯವರೆಗೂ ನನಗೆ ಯಾವುದೇ ಡಿಜಿಟಲ್ ಸಹಿಯ ಅಧಿಕಾರ ನೀಡದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
    ಗ್ರಾಮದ 8 ವಾರ್ಡ್​ಗಳಲ್ಲಿ ಬೀದಿದೀಪದ ಸಮಸ್ಯೆಯಿತ್ತು. ಪ್ರತಿ ವಾರ್ಡ್​ಗೆ 10ರಂತೆ 80 ಎಲ್​ಇಡಿ ಬಲ್ಬ್ ಹಾಕಿಸಲು ಪಿಡಿಒಗೆ ಸೂಚಿಸಿದ್ದೆ. ಅದರಂತೆ 100 ಎಲ್​ಇಡಿ ಬಲ್ಬ್ ತಂದು 80 ಅಳವಡಿಸಿ ಉಳಿದವುಗಳನ್ನು ಪಂಚಾಯಿತಿಯಲ್ಲಿ ಇಡದೇ ನಾಪತ್ತೆ ಮಾಡಿದ್ದಾರೆ. ಅಲ್ಲದೆ ಒಂದು ಬಲ್ಬ್​ನ್ನು ದುಪ್ಪಟ್ಟು ದರಕ್ಕೆ ಖರೀದಿಸಿದ್ದಾರೆ. ಇವರು ತಂದಿರುವ ಬಲ್ಬ್​ಗೆ ಮಾರುಕಟ್ಟೆಯಲ್ಲಿ 200ರಿಂದ 250ರೂ. ದರವಿದೆ. ಆದರೆ, ಇವರು 450ರೂ.ಗೆ ಒಂದರಂತೆ ಖರೀದಿಸಿದ್ದಾರೆ. ಅಲ್ಲದೆ ಪೈಪ್​ಲೈನ್​ಗಳು ಒಡೆದಾಗ ದುರಸ್ತಿಗೆಂದು ತರುವ ಪೈಪ್​ಗಳ ಬಿಲ್​ಗಳಲ್ಲಿಯೂ ಭಾರಿ ಪ್ರಮಾಣದ ವ್ಯತ್ಯಾಸವಿದೆ. ಈ ಕುರಿತು ಪ್ರಶ್ನಿಸಿದರೆ ಪಂಚಾಯಿತಿಯಿಂದ ಹಣ ಕೊಡುವುದು ವಿಳಂಬವಾಗುತ್ತದೆ. ಹೀಗಾಗಿ, ದುಬಾರಿ ದರಕ್ಕೆ ಖರೀದಿಸುವುದು ಅನಿವಾರ್ಯ. ನಿಮಗೆ ಪಂಚಾಯಿತಿಯ ಹಣ ಉಳಿಸುವ ಮನಸಿದ್ದರೇ ನೀವೇ ಹಣ ಕೊಟ್ಟು ಬಲ್ಬ್ ಖರೀದಿಸಿ ತನ್ನಿ. ಪಂಚಾಯಿತಿಯಿಂದ ಹಣ ಬಂದಾಗ ತೆಗೆದುಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇದನ್ನು ಮೇಲಧಿಕಾರಿಗಳು ಪರಿಶೀಲಿಸಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ವಸ್ತುಗಳನ್ನು ಖರೀದಿಸಿದ್ದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರೇಣುಕಾ ಕೆಂಚಲ್ಲನವರ ಒತ್ತಾಯಿಸಿದ್ದಾರೆ.

    ಮಾರುಕಟ್ಟೆ ದರದ ಪ್ರಕಾರವೇ ಬಲ್ಬ್​ಗಳನ್ನು ತಂದಿದ್ದೇವೆ. ಇವರು ಅಧ್ಯಕ್ಷರಾದ ನಂತರ ಸಹಿಯಿಲ್ಲದೆ ಯಾವುದೇ ಬಿಲ್​ಗಳನ್ನು ನಾವು ತೆಗೆದಿಲ್ಲ. ಅಧ್ಯಕ್ಷರ ಆರೋಪಗಳು ಸತ್ಯಕ್ಕೆ ದೂರವಾಗಿವೆ.
    | ಹನುಮಂತಪ್ಪ ಮಲ್ಲೂರ, ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts