More

    ಏ.18, 19ರಂದು ಜಿಲ್ಲೆಯ 13 ಕೇಂದ್ರದಲ್ಲಿ ಸಿಇಟಿ ಪರೀಕ್ಷೆ: ವಿದ್ಯಾರ್ಥಿಗಳು ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯ…!

    ಮಂಡ್ಯ: ಜಿಲ್ಲೆಯಲ್ಲಿ 13 ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಏ.18 ಮತ್ತು 19ರಂದು ನಡೆಯಲಿದೆ. 5,958 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆ.ಆರ್.ಪೇಟೆ ತಾಲೂಕಿನ 2 ಕೇಂದ್ರದಲ್ಲಿ ಒಟ್ಟು 1,142 ವಿದ್ಯಾರ್ಥಿಗಳು ಹಾಗೂ ಮಂಡ್ಯ ನಗರದ 11 ಕೇಂದ್ರಗಳಲ್ಲಿ ಒಟ್ಟು 4,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿಯಾಗಿದ್ದಾರೆ ಎಂದರು.
    ಕೆ.ಆರ್.ಪೇಟೆ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ), ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ), ಲಕ್ಷ್ಮೀಜರ್ನಾಧನ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರ್ಕೇಶ್ವರ ನಗರ, ಮಾಂಡವ್ಯ ಪದವಿ ಪೂರ್ವ ಕಾಲೇಜು ತಾವರೆಗೆರೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಪೊಲೀಸ್ ಕಾಲನಿ, ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಎಂ.ಸಿ.ರಸ್ತೆ, ಸೇಂಟ್ ಜಾನ್ ಪದವಿ ಪೂರ್ವ ಕಾಲೇಜು, ಕಾರ್ಮೆಲ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಮಾಂಡವ್ಯ ಎಕ್ಸ್‌ಲೆನ್ಸ್ ಪದವಿ ಪೂರ್ವ ಕಾಲೇಜು ಎಂ.ಸಿ.ರಸ್ತೆ, ಸದ್ವಿದ್ಯಾ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು.
    ಪರೀಕ್ಷಾ ದಿನದಂದು ಹಾಜರಾಗುವ ಮತ್ತು ಗೈರಾಗುವ ಅಭ್ಯರ್ಥಿಗಳ ವಿವರಗಳನ್ನು ಆನ್‌ಲೈನ್ ಮೂಲಕ ದಾಖಲಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆಂಚ್ ಹಾಗೂ ಡೆಸ್ಕ್ ವ್ಯವಸ್ಥೆ ಉತ್ತಮವಾಗಿರಲಿ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಉಪಮುಖ್ಯ ಅಧೀಕ್ಷಕರು, ವೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರು ಹಾಗೂ ಜಾಗೃತದಳದ ಸದಸ್ಯರು ಪರೀಕ್ಷೆ ಪ್ರಾರಂಭವಾಗುವುದಕ್ಕೂ ಮೊದಲ 2 ಗಂಟೆ ಮುಂಚಿತವಾಗಿ ಕೇಂದ್ರದಲ್ಲಿ ಹಾಜರಿರಬೇಕು ಎಂದರು.
    ಪರೀಕ್ಷೆ ನಡೆಯುವ ದಿನಗಳಂದು ಕೇಂದ್ರಗಳ ಸುತ್ತಲೂ 200 ಮೀ. ಸುತ್ತಳತೆಯಲ್ಲಿ ಐಪಿಸಿ ಸೆಕ್ಷನ್ 144ನೇ ಕಲಂ ಜಾರಿಗೊಳಿಸಲು ಮತ್ತು ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಪೆನ್‌ಡ್ರೈವ್, ಇಯರ್‌ಫೋನ್, ಮೈಕ್ರೋಫೋನ್ ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶಪತ್ರವನ್ನು ಹಾಜರುಪಡಿಸಬೇಕು. ಕೊನೆಯ ಬೆಲ್ ಆಗುವವರೆವಿಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಹೋಗಲು ಅನುಮತಿ ನೀಡದಂತೆ ಪರೀಕ್ಷಾಕೇಂದ್ರಗಳ ಉಪಮುಖ್ಯ ಅಧೀಕ್ಷಕರು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
    ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ಸಲುವಾಗಿ ಫುಲ್‌ಷರ್ಟ್, ಶೂ, ಟೋಪಿ, ಬಾಯಿ, ಕಿವಿ ಹಾಗೂ ತಲೆಮುಚ್ಚುವ ವಸ್ತ್ರವನ್ನು ಧರಿಸುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಮಾಸ್ಕ್ ಅನ್ನು ಧರಿಸುವಂತಿಲ್ಲ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರವನ್ನು ಅಳವಡಿಸಿ. ಕೇಂದ್ರಗಳ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಪ್ರಾರಂಭವಾಗುವ ಮೊದಲು ಒಂದು ಗಂಟೆ ಮುಂಚಿತವಾಗಿ ಮತ್ತು ಮಾರ್ಗಾಧಿಕಾರಿಗಳು ಬಂಡಲ್ ಪಡೆದು ತೆರಳುವವರೆವಿಗೆ ಮಾರ್ಗಾಧಿಕಾರಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ ಎಂದು ಹೇಳಿದರು.
    ಕೇಂದ್ರಗಳ ಉಪಮುಖ್ಯ ಅಧೀಕ್ಷಕರು ಸಮೀಪದ ಪೊಲೀಸ್ ವೃತ್ತ ನಿರೀಕ್ಷಕರ ಸಂಪರ್ಕದಲ್ಲಿದ್ದು, ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ನಿಗಾ ವಹಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಆರೋಗ್ಯ ಸಹಾಯಕಿ ಹಾಗೂ ಆಶಾಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಕೆ.ಇ.ಎ ವತಿಯಿಂದ ನಡೆಸಲಾಗುವ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದ ರೀತಿ ಬಹಳ ಎಚ್ಚರಿಕೆಯಿಂದ ಹಾಗೂ ಜಾಗೃತವಾಗಿ ಕರ್ತವ್ಯ ನಿವಹಿಸುವಂತೆ ಎಲ್ಲ ಅಧಿಕಾರಿಗಳಿಗೂ ಅಗತ್ಯ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
    ಸಭೆಯಲ್ಲಿ ಡಿಡಿಪಿಐ ಶಿವರಾಮೇಗೌಡ, ಡಿಡಿಪಿಯು ಚೆಲುವಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts