More

    ಅನುಶ್ರೀಗೆ ಸಿಸಿಬಿ ನೋಟಿಸ್

    ಮಂಗಳೂರು: ಡ್ರಗ್ಸ್ ಸಾಗಾಟ ಆರೋಪದಲ್ಲಿ ಬಂಧಿತ ಆರೋಪಿಗಳ ಜತೆ ನಂಟು ಇರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ, ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಗುರುವಾರ ನೋಟಿಸು ನೀಡಿದ್ದಾರೆ.

    ನಗರ ಸಿಸಿಬಿ ಮತ್ತು ನಾರ್ಕೋಟಿಕ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ(30) ಹಾಗೂ ಅಕೀಲ್ ನೌಶೀಲ್(28) ಎಂಬುವರನ್ನು ಸೆ.19ರಂದು ಬಂಧಿಸಿದ್ದರು. ಅವರನ್ನು ನಗರ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಅನುಶ್ರೀ ಜತೆಗಿನ ನಂಟಿರುವುದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ನಾಲ್ವರು ಪೊಲೀಸರು ತೆರಳಿದ್ದಾರೆ.

    ಡ್ಯಾನ್ಸರ್ ಲಿಂಕ್: ಆರೋಪಿ ಕಿಶೋರ್ ಜತೆಗಿನ ನಂಟಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇನ್ನೋರ್ವ ಡ್ಯಾನ್ಸರ್, ಚಿತ್ರನಟ ತರುಣ್ ಎಂಬಾತನ್ನು ಗುರುವಾರ ಬಂಧಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಬಂಧಿಸಿ, ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ಅನುಶ್ರೀಗೆ ತರುಣ್ ಕೊರಿಯೋಗ್ರಾರ್ ಆಗಿದ್ದು, ಇಬ್ಬರ ನಡುವೆಯೂ ಉತ್ತಮ ಒಡನಾಟವಿತ್ತು. ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ತರುಣ್ ಸೂಚನೆ ಮೇರೆಗೆ ಕಿಶೋರ್ ಅನುಶ್ರೀಗೆ ಕೊರಿಯೋಗ್ರಾರ್ ಆಗಿ, ನಿರ್ದೇಶನ ಮಾಡಿದ್ದ. ಈ ರಿಯಾಲಿಟಿ ಶೋದಲ್ಲಿ ಅನುಶ್ರೀ ವಿಜೇತರಾಗಿದ್ದರು. ಬಳಿಕ ಇವರಿಬ್ಬರ ಜತೆ ಅನುಶ್ರೀ ನಂಟು ಹೊಂದಿದ್ದರು ಎಂದು ವಿಚಾರಣೆಯಿಂದ ಪೊಲೀಸರಿಗೆ ಗೊತ್ತಾಗಿದೆ.

    ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ: ಕಿಶೋರ್ ಶೆಟ್ಟಿ ಜತೆ ನಂಟು ಹೊಂದಿದ್ದ ಯುವತಿಯರನ್ನು ನಗರ ಪೊಲೀಸರು ವಿಚಾರಣೆ ನಡೆಸಿದ್ದು, ಒಬ್ಬ ಯುವತಿಯನ್ನು ಈಗಾಗಲೇ ಬಂಧಿಸಲಾಗಿದೆ. ಗುರುವಾರ ತರುಣ್ ಎಂಬಾತನನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಸೋಮವಾರ ಮಣಿಪುರ ಮೂಲದ ಯುವತಿಯನ್ನು ವಶಕ್ಕೆ ಪಡೆದ ಸಂದರ್ಭ ಆಕೆ ಡ್ರಗ್ಸ್ ಸೇವಿಸಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ದೃಢಪಟ್ಟಿತ್ತು. ಎರಡು ದಿನಗಳ ಕಾಲ ಆಕೆ ಡ್ರಗ್ಸ್ ನಶೆಯಲ್ಲಿದ್ದ ಕಾರಣ ವಿಚಾರಣೆ ನಡೆಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಿಶೋರ್ ನಗರದ ಕಾಲೇಜು ವಿದ್ಯಾರ್ಥಿನಿಯರು, ಯುವತಿಯರ ಜತೆ ನಂಟು ಹೊಂದಿದ್ದು, ಅವರನ್ನು ಪಬ್, ಪಾರ್ಟಿಗಳಿಗೆ ಕರೆದುಕೊಂಡು ಹೋಗುತ್ತಿದ್ದುದು ವಿಚಾರಣೆಯಿಂದ ಪೊಲೀಸರಿಗೆ ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts