ಇಂಥಾ ವರ್ತನೆ ಸರಿಯಲ್ಲ... ತಿಲಕ್ ವರ್ಮಾಗೆ 'ಅಂಧೇರೆ' ಎಂದ ಅರ್ಷದೀಪ್ ಸಿಂಗ್ ವಿರುದ್ಧ ನೆಟ್ಟಿಗರ ಆಕ್ರೋಶ! Tilak Varma

ಇಂಥಾ ವರ್ತನೆ ಸರಿಯಲ್ಲ... ತಿಲಕ್ ವರ್ಮಾಗೆ 'ಅಂಧೇರೆ' ಎಂದ ಅರ್ಷದೀಪ್ ಸಿಂಗ್ ವಿರುದ್ಧ ನೆಟ್ಟಿಗರ ಆಕ್ರೋಶ! Tilak Varma
ಇಂಥಾ ವರ್ತನೆ ಸರಿಯಲ್ಲ... ತಿಲಕ್ ವರ್ಮಾಗೆ 'ಅಂಧೇರೆ' ಎಂದ ಅರ್ಷದೀಪ್ ಸಿಂಗ್ ವಿರುದ್ಧ ನೆಟ್ಟಿಗರ ಆಕ್ರೋಶ! Tilak Varma
Published on

ಪ್ರಮುಖ ಮುಖ್ಯಾಂಶಗಳು

  • ತಿಲಕ್ ವರ್ಮಾಗೆ "ಅಂಧೇರೆ" ಎಂದು ಕರೆದ ಅರ್ಶ್‌ದೀಪ್ ಸಿಂಗ್
  • ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ಇಂತಹ ವರ್ತನೆಯನ್ನು ಖಂಡಿಸಿದ ನೆಟ್ಟಿಗರು
  • ಇದು ಜನಾಂಗೀಯ ನಿಂದನೆಯ ಆರೋಪ ಹಾಗೂ ನೆಟ್ಟಿಗರ ಆಕ್ರೋಶ
Tilak Varma : ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ನಡೆದ ಘಟನೆಯೊಂದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಅವರು ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮ ಅವರನ್ನು "ಓಯ್ ಅಂಧೇರೆ" (ಹೇ ಕತ್ತಲೆಯೇ) ಎಂದು ಕರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಅರ್ಷದೀಪ್ ಬಳಸಿದ ಈ ಪದವು ವರ್ಣಭೇದ ಅಥವಾ ಜನಾಂಗೀಯ ನಿಂದನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ಇಂತಹ ವರ್ತನೆಯನ್ನು ಖಂಡಿಸಿದ್ದಾರೆ. ಇಬ್ಬರೂ ಆಟಗಾರರ ನಡುವಿನ ಈ ಸಂಭಾಷಣೆಯು ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಅರ್ಷದೀಪ್ ಸಿಂಗ್ ಅವರು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗ್‌ಗಳು ಮತ್ತು ರೀಲ್ಸ್‌ಗಳ ಮೂಲಕ ಸಕ್ರಿಯರಾಗಿರುತ್ತಾರೆ. ಈ ಬಾರಿ ಮಾತ್ರ ಅಭಿಮಾನಿಗಳ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅರ್ಷದೀಪ್ ಮತ್ತು ತಿಲಕ್ ವರ್ಮ ಅವರು ಮೈದಾನದ ಹೊರಗೂ ಉತ್ತಮ ಸ್ನೇಹವನ್ನು ಹೊಂದಿದ್ದಾರೆ ಎಂಬುದು ನಿಜವಾದರೂ, ಅಭಿಮಾನಿಗಳು ಮಾತ್ರ ಈ ಘಟನೆಯನ್ನು ಹಗುರವಾಗಿ ಪರಿಗಣಿಸಿಲ್ಲ. ವೈಯಕ್ತಿಕ ಸ್ನೇಹ ಏನೇ ಇರಲಿ, ಸಾರ್ವಜನಿಕವಾಗಿ ಬಳಸಿದ ಇಂತಹ ಪದಗಳು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನೆಟ್ಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ವೇಗಿಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಧರ್ಮಶಾಲಾದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ತಿಲಕ್ ವರ್ಮ ಅವರ ಸ್ಫೋಟಕ ಅರ್ಧಶತಕ ಹಾಗೂ ರಯಾನ್ ರಿಕೆಲ್ಟನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. 201 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ಸತತ ಐದನೇ ಸೋಲನ್ನು ಅನುಭವಿಸಿದಂತಾಗಿದ್ದು, 13 ಅಂಕಗಳೊಂದಿಗೆ ಪ್ಲೇ ಆಫ್ ರೇಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಪೈಪೋಟಿಗೆ ಸಿಲುಕಿದೆ.
ಮುಂಬೈ ಪರ ಇನ್ನಿಂಗ್ಸ್ ಆರಂಭಿಸಿದ ರಯಾನ್ ರಿಕೆಲ್ಟನ್ ಕೇವಲ 23 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅವರು ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರ ಓವರ್‌ಗಳಲ್ಲಿ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದರು. ಇನ್ನೊಂದೆಡೆ ರೋಹಿತ್ ಶರ್ಮಾ ರನ್ ಗಳಿಸಲು ಆರಂಭದಲ್ಲಿ ಸ್ವಲ್ಪ ಪರದಾಡಿದರೂ, ಪವರ್‌ಪ್ಲೇ ಅಂತ್ಯದಲ್ಲಿ ಒಂದು ಭರ್ಜರಿ ಸಿಕ್ಸರ್ ಸಿಡಿಸಿದರು. ಆದರೆ ಅಜ್ಮತುಲ್ಲಾ ಮತ್ತು ಮಾರ್ಕೊ ಜಾನ್ಸೆನ್ ಅವರು ರಿಕೆಲ್ಟನ್ ಮತ್ತು ನಮನ್ ಧೀರ್ ಅವರನ್ನು ಬೇಗನೇ ಔಟ್ ಮಾಡುವ ಮೂಲಕ ಪಂಜಾಬ್‌ಗೆ ಬ್ರೇಕ್ ನೀಡಿದರು.
ರೋಹಿತ್ ಶರ್ಮಾ 25 ರನ್ ಗಳಿಸಿ ಚಹಾಲ್ ಎಸೆತದಲ್ಲಿ ಔಟಾದ ಬಳಿಕ ಕ್ರೀಸ್‌ಗೆ ಬಂದ ತಿಲಕ್ ವರ್ಮ ಪಂದ್ಯದ ಗತಿಯನ್ನೇ ಬದಲಿಸಿದರು. ಶೆರ್ಫೇನ್ ರುದರ್‌ಫೋರ್ಡ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ತಿಲಕ್, ಯುಜ್ವೇಂದ್ರ ಚಹಾಲ್ ಅವರ ಓವರ್ ಒಂದರಲ್ಲೇ 20 ರನ್ ಚಚ್ಚಿದರು. ರುದರ್‌ಫೋರ್ಡ್ 20 ರನ್ ಗಳಿಸಿ ಔಟಾದ ನಂತರ ಬಂದ ವಿಲ್ ಜ್ಯಾಕ್ಸ್, ತಿಲಕ್ ಅವರಿಗೆ ಉತ್ತಮ ಸಾಥ್ ನೀಡಿದರು. ತಿಲಕ್ ವರ್ಮ ಕೇವಲ 33 ಎಸೆತಗಳಲ್ಲಿ 75 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ವಿಲ್ ಜ್ಯಾಕ್ಸ್ 10 ಎಸೆತಗಳಲ್ಲಿ 25 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಕೊನೆಯ ಎರಡು ಓವರ್‌ಗಳಲ್ಲಿ ಮುಂಬೈಗೆ 28 ರನ್‌ಗಳ ಅಗತ್ಯವಿತ್ತು. ಅರ್ಶ್‌ದೀಪ್ ಸಿಂಗ್ ಎಸೆದ 19ನೇ ಓವರ್‌ನಲ್ಲಿ 13 ರನ್ ಹಾಗೂ ಅಂತಿಮ ಓವರ್‌ನಲ್ಲಿ 19 ರನ್ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಜಯಭೇರಿ ಬಾರಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್, ಪ್ರಭ್‌ಸಿಮ್ರಾನ್ ಸಿಂಗ್ ಅವರ ಅರ್ಧಶತಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 200 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಆದರೆ ತಿಲಕ್ ವರ್ಮ ಅವರ ಆಟದ ಮುಂದೆ ಈ ಮೊತ್ತ ಸಾಲದಾಯಿತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net