ದುಬಾರಿ ಫೆರಾರಿಯಲ್ಲಿ ರಸ್ತೆ ಹಂಪ್ ದಾಟಿಸಲು ಪರದಾಡಿದ ಹಾರ್ದಿಕ್​ ಪಾಂಡ್ಯ: ವಿಡಿಯೋ ವೈರಲ್​... Hardik Pandya

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ( Hardik Pandya ) ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್‌ ಕಾರಿನೊಂದಿಗೆ ಅಡ್ಡಾಡಿದ್ದಾರೆ.
ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ( Hardik Pandya ) ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್‌ ಕಾರಿನೊಂದಿಗೆ ಅಡ್ಡಾಡಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್‌ ಕಾರಿನೊಂದಿಗೆ ಅಡ್ಡಾಡಿದ ಹಾರ್ದಿಕ್ ಪಾಂಡ್ಯ
  • ದುಬಾರಿ ಫೆರಾರಿ ಕಾರಿನಲ್ಲಿ ರಸ್ತೆ ಹಂಪ್​ ದಾಟಿಸಲು ಪರಾದಾಡಿದ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​
  • ಕಾರಿನ ಕೆಳಭಾಗಕ್ಕೆ ಯಾವುದೇ ಡಿಕ್ಕಿ ಆಗದಿರಲಿ ಎಂದು ಕಾರನ್ನು ಓರೆಯಾಗಿ, ಜಿಗ್​ಜಾಗ್​ ರೂಪದಲ್ಲಿ ಚಾಲನೆ
ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ( Hardik Pandya ) ಮುಂಬೈ ರಸ್ತೆಯಲ್ಲಿ ತಮ್ಮ ಹೊಚ್ಚ ಹೊಸ ಸೂಪರ್‌ ಕಾರಿನೊಂದಿಗೆ ಅಡ್ಡಾಡಿದ್ದಾರೆ. ಈ ವೇಳೆ ದುಬಾರಿ ಫೆರಾರಿ ಕಾರಿನಲ್ಲಿ ರಸ್ತೆ ಹಂಪ್​ ದಾಟಿಸಲು ಪರಾದಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರು 12 ಕೋಟಿ ರೂ. ಮೌಲ್ಯದ ಫೆರಾರಿ 12 ಸಿಲಿಂಡ್ರಿ ಸ್ಪೋರ್ಟ್ಸ್​ ಕಾರಿನೊಂದಿಗೆ ಕಾಣಿಸಿಕೊಂಡು ಸುದ್ದಿಯಾದರು. ಕಪ್ಪು ಬಣ್ಣದ ಫೆರಾರಿ ಕಾರನ್ನು ಸ್ವತಃ ಹಾರ್ದಿಕ್​ ಅವರೇ ತಮ್ಮ ಮನೆಗೆ ಓಡಿಸಿಕೊಂಡು ಬಂದರು. ಈ ವೇಳೆ ಕಾರಿನಲ್ಲಿ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಇದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಭಿಮಾನಿಯೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅಲ್ಲದೆ, ಇತ್ತೀಚೆಗೆ ಮಹಿಕಾ ಮತ್ತು ಹಾರ್ದಿಕ್​, ಫೆರಾರಿ ಕಾರಿಗೆ ಪೂಜೆ ಮಾಡುವ ವಿಡಿಯೋವೂ ವೈರಲ್​ ಆಗಿತ್ತು.

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಏನಿದೆ?

ಸದ್ಯ ವೈರಲ್ ಆಗಿರುವ​ ವಿಡಿಯೋದಲ್ಲಿ, ಹಾರ್ದಿಕ್ ಅವರು ತಮ್ಮ ಫೆರಾರಿ ಸಿಲಿಂಡ್ರಿ ಕಾರನ್ನು ರಸ್ತೆಯ ಮಧ್ಯದಲ್ಲಿರುವ ಸ್ಪೀಡ್ ಬ್ರೇಕರ್ ಮೇಲೆ ನಿಧಾನವಾಗಿ ಚಲಿಸುತ್ತಾರೆ. ಕಾರಿನ ಕೆಳಭಾಗಕ್ಕೆ ಯಾವುದೇ ಡಿಕ್ಕಿ ಆಗದಿರಲಿ ಎಂದು ಕಾರನ್ನು ಓರೆಯಾಗಿ, ಜಿಗ್​ಜಾಗ್​ ರೂಪದಲ್ಲಿ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಬಳಿಕ ಕಾರನ್ನು ನಿಧಾನ ಮಾಡಿ, ಅಲ್ಲಿದ್ದ ಪೊಲೀಸ್​ ಸಿಬ್ಬಂದಿಯನ್ನು ಮಾತನಾಡಿಸಿ, ಕೈಕುಲುಕಿ ಅಲ್ಲಿಂದ ಹೋಗುತ್ತಾರೆ.
ಅಂದಹಾಗೆ, ಹಾರ್ದಿಕ್​ ಅವರು ಫೆರಾರಿ 12 ಸಿಲಿಂಡ್ರಿ ಕಾರನ್ನು ಖರೀದಿ ಮಾಡಿದ್ದು, ತಮ್ಮ ಗ್ಯಾರೇಜ್‌ಗೆ ಮತ್ತೊಂದು ದುಬಾರಿ ವಾಹನವನ್ನು ಸೇರಿಸಿದ್ದಾರೆ. ಈಗಾಗಲೇ ಹಾರ್ದಿಕ್ ಅವರ ಗ್ಯಾರೆಜ್​ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ EVO, ಲಂಬೋರ್ಘಿನಿ ಉರಸ್, ಮರ್ಸಿಡಿಸ್-AMG G63, ರೇಂಜ್ ರೋವರ್ ಮತ್ತು ಆಡಿ A6 ಕಾರುಗಳಿವೆ.

ಫೆರಾರಿ 12 ಸಿಲಿಂಡ್ರಿ ಕಾರಿನ ವಿಶೇಷತೆ ಏನು?

* ಫೆರಾರಿ ಸಂಸ್ಥೆಯು ತನ್ನ ಐಕಾನಿಕ್ V12 ಇಂಜಿನ್ ಪರಂಪರೆಯನ್ನು ಮುಂದುವರಿಸುತ್ತಾ ಬಿಡುಗಡೆ ಮಾಡಿರುವ 'ಫೆರಾರಿ 12 ಸಿಲಿಂಡ್ರಿ' ಕಾರು ಆಟೋಮೊಬೈಲ್ ಲೋಕದ ಒಂದು ಅದ್ಭುತವಾಗಿದೆ. ಸುಮಾರು 12 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವ ಈ ಕಾರು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.

* ಈ ಕಾರಿನ ಹೆಸರೇ ಸೂಚಿಸುವಂತೆ, ಇದು 6.5-ಲೀಟರ್ ಸಾಮರ್ಥ್ಯದ ನೈಸರ್ಗಿಕವಾಗಿ ಆಸ್ಪಿರೇಟೆಡ್ (Naturally Aspirated) V12 ಇಂಜಿನ್ ಹೊಂದಿದೆ. ಇದು ಯಾವುದೇ ಟರ್ಬೋಚಾರ್ಜರ್ ಇಲ್ಲದೆ 819 BHP ಶಕ್ತಿ ಮತ್ತು 678 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

* ವೇಗದ ವಿಷಯದಲ್ಲಿ ಈ ಫೆರಾರಿ ಬಗ್ಗೆ ಮಾತುನಾಡುವಂತೆಯೇ ಇಲ್ಲ. ಇದು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ ಗಿಂತಲೂ ಹೆಚ್ಚಿದೆ.

* ಇದರ ವಿನ್ಯಾಸವು 1960ರ ದಶಕದ ಫೆರಾರಿ 365 GTB/4 'ಡೇಟೋನಾ' ಕಾರಿನಿಂದ ಸ್ಫೂರ್ತಿ ಪಡೆದಿದೆ. ಉದ್ದವಾದ ಬಾನೆಟ್ ಮತ್ತು ಮುಂಭಾಗದ ಕಪ್ಪು ಪಟ್ಟಿಯು ಹಳೆಯ ಕಾಲದ ಸೌಂದರ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಶ್ರಣದಂತೆ ಕಾಣುತ್ತದೆ.

* ಕಾರಿನ ಹಿಂಭಾಗದಲ್ಲಿ ಎರಡು ಸಕ್ರಿಯ ಫ್ಲಾಪ್‌ಗಳನ್ನು (Active Flaps) ನೀಡಲಾಗಿದೆ. ಇವು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಗಾಳಿಯ ಒತ್ತಡವನ್ನು ನಿಯಂತ್ರಿಸಿ, ಕಾರು ರಸ್ತೆಗೆ ಅಂಟಿಕೊಂಡಂತೆ ಸ್ಥಿರವಾಗಿ ಸಾಗಲು (Downforce) ಸಹಾಯ ಮಾಡುತ್ತವೆ.

* ಕಾರಿನ ಒಳಭಾಗದಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಪ್ರತ್ಯೇಕ ಅನುಭವ ನೀಡಲು ಮೂರು ಸ್ಕ್ರೀನ್‌ಗಳನ್ನು ನೀಡಲಾಗಿದೆ. 10.25-ಇಂಚಿನ ಸೆಂಟ್ರಲ್ ಡಿಸ್‌ಪ್ಲೇ, 15.6-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರಯಾಣಿಕರಿಗಾಗಿ 8.8-ಇಂಚಿನ ಪ್ರತ್ಯೇಕ ಸ್ಕ್ರೀನ್ ಇದೆ.

* ಈ ಕಾರಿನಲ್ಲಿ 'ಫೋರ್-ವ್ಹೀಲ್ ಇಂಡಿಪೆಂಡೆಂಟ್ ಸ್ಟೀರಿಂಗ್' ತಂತ್ರಜ್ಞಾನವಿದೆ. ಇದು ತಿರುವುಗಳಲ್ಲಿ ಕಾರನ್ನು ಅತ್ಯಂತ ನಿಖರವಾಗಿ ಮತ್ತು ಸುಲಭವಾಗಿ ನಿಯಂತ್ರಿಸಲು ಚಾಲಕನಿಗೆ ನೆರವಾಗುತ್ತದೆ. ಇದರಿಂದ ಕಾರಿನ ಹ್ಯಾಂಡ್ಲಿಂಗ್ ತುಂಬಾ ಸುಲಭವಾಗಿರುತ್ತದೆ ಮತ್ತು ಅದ್ಭುತವಾಗಿರುತ್ತದೆ.

ವಿಶ್ವಕಪ್​ನಲ್ಲಿ ಹಾರ್ದಿಕ್​ ಪ್ರದರ್ಶನ

ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂಬತ್ತು ಪಂದ್ಯಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದ ಹಾರ್ದಿಕ್, 9 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದರುಕ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net