ಎರಡಲ್ಲ ಇನ್ನೂ 10 ಪಂದ್ಯಗಳಲ್ಲಿ ಹೀನಾಯವಾಗಿ ಆಡಿದ್ರೂ ಅವಕಾಶ ಕೊಡ್ಲೇಬೇಕು: ಗಿಲ್ ಪರ ನಿಂತ ದಿಗ್ಗಜ ಕ್ರಿಕೆಟಿಗ! Shubman Gill

ಟೀಮ್ ಇಂಡಿಯಾ ಉಪನಾಯಕ ಶುಭಮಾನ್ ಗಿಲ್
ಟೀಮ್ ಇಂಡಿಯಾ ಉಪನಾಯಕ ಶುಭಮಾನ್ ಗಿಲ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯಲ್ಲಿ ಶುಭಮಾನ್ ಗಿಲ್​ ಕಳಪೆ ಪ್ರದರ್ಶನ
  • ಗಿಲ್​ ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿ ಎಂದ ಜನರು
  • ಗಿಲ್ ಪರ ಬ್ಯಾಟ್​ ಬೀಸಿದ ಮಾಜಿ ಕ್ರಿಕೆಟಿಗ ಮತ್ತು ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ
ನವದೆಹಲಿ: ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಮುಂದುವರೆದಂತೆ ಉಪನಾಯಕ ಶುಭಮಾನ್ ಗಿಲ್ ( Shubman gill ) ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಗಿಲ್ ಅವರು ಟಿ20 ಪಂದ್ಯಗಳಿಗೆ ಸರಿಯಾಗಿ ಸಿದ್ಧವಾಗಿಲ್ಲ ಮತ್ತು ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಬೇಕು ಎಂದು ಅನೇಕ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗರು ಸಹ ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಹೀಗಿರುವಾಗ ಮಾಜಿ ಕ್ರಿಕೆಟಿಗ ಮತ್ತು ಗುಜರಾತ್ ಟೈಟಾನ್ಸ್ ಮುಖ್ಯ ಕೋಚ್ ಆಶಿಶ್ ನೆಹ್ರಾ ಗಿಲ್ ಪರ ಬ್ಯಾಟ್​ ಬೀಸಿದ್ದಾರೆ.
ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಶುಭಮಾನ್​ ಗಿಲ್ ಸತತ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಪ್ರದರ್ಶನ ನೀಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಮೊದಲ ಪಂದ್ಯದಲ್ಲಿ ನಾಲ್ಕು ರನ್ ಗಳಿಸಿ ಔಟಾದ ಗಿಲ್, ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು.
ಇನ್ನು ಕಳೆದ 14 ಟಿ20 ಪಂದ್ಯಗಳಲ್ಲಿ ಶುಭಮಾನ್​ ಗಿಲ್ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಇದು 2025ರ ಇಡೀ ವರ್ಷದಲ್ಲಿ ಅವರ ಕೆಟ್ಟ ಪ್ರದರ್ಶನವಾಗಿದೆ. ಇದರೊಂದಿಗೆ, ಗಿಲ್ ಅವರನ್ನು ಟಿ20 ಸರಣಿಯಿಂದ ಕೈಬಿಡಬೇಕೆಂಬ ಬೇಡಿಕೆಗಳು ಕೇಳಿಬರುತ್ತಿವೆ. ಗಿಲ್ ಬದಲಿಗೆ ಯಶಸ್ವಿ ಜೈಸ್ವಾಲ್ ಅಥವಾ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
ಗಿಲ್ ಅವರನ್ನು ತಂಡದಿಂದ ತೆಗೆದುಹಾಕಬೇಕೆಂಬ ಹಲವು ಬೇಡಿಕೆಗಳ ನಡುವೆಯೂ, ಆಶಿಶ್ ನೆಹ್ರಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಟಿ20ಯಲ್ಲಿ ಗಿಲ್ ಅವರನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ. ಗಿಲ್, ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ವಿಫಲರಾಗಿದ್ದಾರೆ. ಅವರಿಗೆ ಇನ್ನೂ ಅವಕಾಶ ನೀಡಬೇಕಿದೆ ಎಂದು ನೆಹ್ರಾ ಹೇಳಿದ್ದಾರೆ.
ಎರಡು ಪಂದ್ಯಗಳಲ್ಲಿ ವಿಫಲರಾದ ಮಾತ್ರಕ್ಕೆ ಗಿಲ್​ ಅವರನ್ನು ಬದಿಗೆ ಇಡುವುದು ಸರಿಯಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮೂರು ತಿಂಗಳಲ್ಲ, ಮೂರು ವಾರಗಳ ಮೊದಲು ಗಿಲ್ ಅವರು ಈ ರೀತಿಯ ಪ್ರದರ್ಶನ ನೀಡಿದರೂ ನಾವು ಚಿಂತಿಸುವುದಿಲ್ಲ. ಟಿ20 ಕ್ರಿಕೆಟ್ ತುಂಬಾ ವಿಭಿನ್ನವಾಗಿದೆ. ಗಿಲ್ ಅವರು ಯಾವುದೇ ಕ್ಷಣದಲ್ಲಿ ಫಾರ್ಮ್‌ಗೆ ಬರುತ್ತಾರೆ ಎಂದು ನೆಹ್ರಾ ಅವರು ಗಿಲ್​ ಪರ ಬ್ಯಾಟ್​ ಬೀಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net