ಸುನೇತ್ರಾಗೆ ಡಿಸಿಎಂ 'ಪವರ್'; ಬಿಜೆಪಿಯ ನಿರ್ಧಾರ ತಿಳಿಸಿದ ಸಿಎಂ ದೇವೇಂದ್ರ ಫಡ್ನವೀಸ್ | Sunetra Pawar

Sunetra Pawar | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್​ ಪವಾರ್​​ ಪತ್ನಿ ಸುನೇತ್ರಾ ಪವಾರ್
Sunetra Pawar | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್​ ಪವಾರ್​​ ಪತ್ನಿ ಸುನೇತ್ರಾ ಪವಾರ್
Published on
ಮುಂಬೈ: ದಿ. ಅಜಿತ್​ ಪವಾರ್​​ ಪತ್ನಿ ಸುನೇತ್ರಾ ಪವಾರ್​ರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಅಜಿತ್ ದಾದಾ ಕುಟುಂಬ ಮತ್ತು ಎನ್​​ಸಿಪಿಯೊಂದಿಗೆ ಬಿಜೆಪಿ ಪಕ್ಷ ಮತ್ತು ಮಹಾಯುತಿ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಸಿಎಂ ಫಡ್ನವೀಸ್ ಹೇಳಿದರು.

ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಜಿತ್ ದಾದಾ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದ್ದು, ಇತ್ತ ಇನ್ನೊಂದು ಕಡೆ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಎನ್‌ಸಿಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಫುಲ್ ಪಟೇಲ್​ಗೆ ಯಾಕೆ..?

ಪ್ರಫುಲ್ ಪಟೇಲ್ ಒಬ್ಬ ಚುನಾವಣಾ ತಂತ್ರಜ್ಞ ಮತ್ತು ಟ್ರಬಲ್​ ಶೂಟರ್​ ಆಗಿ ಪಕ್ಷಕ್ಕೆ ನೆರವಾಗಿದ್ದಾರೆ ಎನ್ನುವ ಅಂಶ ಅವರ ಆಯ್ಕೆಗೆ ಪ್ರಮುಖ ಕಾರಣವಾಗಿದ್ದು, ಅವರಿಗೆ ಪಕ್ಷಾತೀತವಾಗಿ ದೆಹಲಿಯವರ ಸಂಪರ್ಕವಿದೆ. ಬಿಜೆಪಿ ವರಿಷ್ಟರೊಂದಿಗಿನ ಉತ್ತಮ ಬಾಂಧವ್ಯವು ಎನ್‌ಡಿಎ ಒಕ್ಕೂಟದಲ್ಲಿ ಅಜಿತ್ ಪವಾರ್ ಬಣವು ಪ್ರಸ್ತುತವಾಗುವಂತೆ ಮಾಡಿತು ಎನ್ನಲಾಗಿದೆ.
ಈ ಹಿಂದಿನ ಯುಪಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ, ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಪ್ರಫುಲ್ ಪಟೇಲ್, ಪ್ರಸ್ತುತ ಆಡಳಿತ ಮತ್ತು ವಿರೋಧ ಪಕ್ಷಗಳ ಉನ್ನತ ನಾಯಕರೊಂದಿಗೆ ತಮ್ಮದೇ ಆದ ಸಂಪರ್ಕವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎನ್‌ಸಿಪಿ ವಿಭಜನೆಯಾದಾಗ ಚುನಾವಣಾ ಆಯೋಗದೊಂದಿಗಿನ ಹೋರಾಟ ಮತ್ತು ಕಾನೂನು ಜಟಿಲತೆಗಳನ್ನು ತೆರೆಮರೆಯಿಂದ ನಿಭಾಯಿಸಿದವರು ಪ್ರಫುಲ್ ಪಟೇಲ್. ಶರದ್ ಪವಾರ್​ರ ಆತ್ಮೀಯರಾಗಿದ್ದರಿಂದಲೇ ಅವರ ನಡೆಗಳ ಬಗ್ಗೆ ತಿಳಿದುಕೊಂಡು ಅಜಿತ್​ ಬಣಕ್ಕೆ ಮಾನ್ಯತೆ ಸಿಗಲು ನೆರವಾದರು ಎಂಬ ಮಾತು ಮಹಾರಾಷ್ಟ್ರದ ರಾಜಕೀಯ ವಲದಯಲ್ಲಿ ಹರಿದಾಡುತ್ತಿದೆ.

ಶಾಸಕಾಂಗ ಪಕ್ಷದ ಸಭೆ

ಶನಿವಾರ ಮಧ್ಯಾಹ್ನ 2 ಗಂಟೆಗೆ ಎನ್‌ಸಿಪಿ ಶಾಸಕರ ಸಭೆ ನಡೆಯಲಿದ್ದು, ಅಲ್ಲಿ ಸುನೇತ್ರಾರನ್ನು ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಮುಂಬೈನ ರಾಜಭವನದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಗುರುವಾರ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ರಾಜಕೀಯ ನಾಯಕರು, ಇತರ ಗಣ್ಯರು ಉಪಸ್ಥಿತರಿದ್ದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net