ಉತ್ತರ ಭಾರತೀಯರು ಕೇವಲ ಪಾನಿಪುರಿ ಮಾರಲು, ಟೇಬಲ್ ಒರೆಸಲು ಲಾಯಕ್ಕು...ನಾಲಿಗೆ ಹರಿಬಿಟ್ಟ ಡಿಎಂಕೆ ಸಚಿವ | MRK Panneerselvam

MRK Panneerselvam | ತಮಿಳುನಾಡಿನ ಕೃಷಿ ಸಚಿವ ಎಂ.ಆರ್.ಕೆ. ಪನ್ನೀರ್ ಸೆಲ್ವಂ
MRK Panneerselvam | ತಮಿಳುನಾಡಿನ ಕೃಷಿ ಸಚಿವ ಎಂ.ಆರ್.ಕೆ. ಪನ್ನೀರ್ ಸೆಲ್ವಂ
Published on
ಚೆನ್ನೈ: ತಮಿಳುನಾಡಿನ ಕೃಷಿ ಸಚಿವ ಎಂ.ಆರ್.ಕೆ. ಪನ್ನೀರ್ ಸೆಲ್ವಂ, ಉತ್ತರ ಭಾರತೀಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಸದ್ಯ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಚೆಂಗಲ್ಪಟ್ಟು ಜಿಲ್ಲೆಯ ಮಧುರಾಂತಕಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಾದೇಶಿಕ ತಾರತಮ್ಯಕ್ಕೆ ನಾಂದಿ ಹಾಡಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಪನ್ನೀರ್ ಸೆಲ್ವಂ, ಉತ್ತರ ಭಾರತೀಯರು ತಮಿಳುನಾಡಿಗೆ ಬರುವುದು ಕೇವಲ ಪಾನಿಪುರಿ ಮಾರಲು, ಕಟ್ಟಡ ನಿರ್ಮಾಣ ಕೆಲಸ ಮಾಡಲು ಅಥವಾ ಹೋಟೆಲ್‌ಗಳಲ್ಲಿ ಟೇಬಲ್ ಸ್ವಚ್ಛಗೊಳಿಸಲು ಮಾತ್ರ ಎಂದು ಅವರು ಹೇಳಿದ್ದಾರೆ.
ಸಚಿವ ಪನ್ನೀರ್ ಸೆಲ್ವಂರಿಂದ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಬಿಜೆಪಿ ನಾಯಕರು ಡಿಎಂಕೆ ವಿರುದ್ಧ ಮುಗಿಬಿದ್ದಿದ್ದು, ತಮ್ಮ ಎಕ್ಸ್​ ಖಾತೆಯಲ್ಲಿ ಪೊಸ್ಟ್​ ಹಂಚಿಕೊಂಡಿರುವ ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ನೈನಾರ್ ನಾಗೇಂದ್ರನ್, ಎಲ್ಲಾ ಜನರು ನಮ್ಮವರೇ ಎಂಬ 'ಯಾದುಮ್ ಊರೇ ಯಾವರುಮ್ ಕೇಳಿರ್' ಎಂಬ ತತ್ವವನ್ನು ಪಾಲಿಸುವ ತಮಿಳು ಮಣ್ಣಿನಲ್ಲಿ, ಡಿಎಂಕೆ ನಾಯಕರು ಇಂತಹ ದ್ವೇಷದ ಬೀಜ ಬಿತ್ತುತ್ತಿರುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕ್ಷಮೆಯಾಚನೆಗೆ ಆಗ್ರಹ
ಸಚಿವರು ಈ ಹೇಳಿಕೆಯ ಕುರಿತು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದು, ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷ ಪ್ರಚೋದಿಸುತ್ತಿರುವ ಡಿಎಂಕೆ ನಿಲುವನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೆಂಬಲಿಸುತ್ತವೆಯೇ ಎಂದು ನಾಗೇಂದ್ರನ್ ಪ್ರಶ್ನಿಸಿದ್ದಾರೆ.

ಶೌಚಾಲಯ ಸ್ವಚ್ಛಗೊಳಿಸುವವರು ಎಂದಿದ್ದ ದಯಾನಿಧಿ ಮಾರನ್

ಡಿಎಂಕೆ ಸಂಸದ ದಯಾನಿಧಿ ಮಾರನ್ ನೀಡಿದ್ದ ಹೇಳಿಕೆ ದೊಡ್ಡಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ತಮಿಳುನಾಡಿನಲ್ಲಿ ನಾವು ತಮಿಳು ಮತ್ತು ಇಂಗ್ಲಿಷ್ ಕಲಿಯುತ್ತೇವೆ, ಹಾಗಾಗಿ ನಮ್ಮ ಯುವಕರು ಐಟಿ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾರೆ. ಆದರೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೇವಲ ಹಿಂದಿ ಕಲಿಯುವವರು ನಮ್ಮ ರಾಜ್ಯಕ್ಕೆ ಬಂದು ರಸ್ತೆಗಳನ್ನು ಗುಡಿಸುತ್ತಾರೆ ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂದಿದ್ದರು.
ಸಚಿವರ ಈ ಹೇಳಿಕೆಯು ಕೇವಲ ತಮಿಳುನಾಡಿಗೆ ಸೀಮಿತವಾಗದೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿಯೂ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಇದು ರಾಷ್ಟ್ರ ಮಟ್ಟದಲ್ಲಿ ಉತ್ತರ vs ದಕ್ಷಿಣ ಎಂಬ ವಿಭಜಕ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. 234 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net