ಇರಾನ್ 60 ದಿನಗಳಲ್ಲಿ ಒಪ್ಪಂದಕ್ಕೆ ಬರದಿದ್ರೆ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದಿಂದ ಸುಂಕ: ಡೊನಾಲ್ಡ್ ಟ್ರಂಪ್ | Donald Trump

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಇರಾನ್​ 60 ದಿನಗಳ ಕದನ ವಿರಾಮದೊಳಗೆ ಅಂತಿಮ ಒಪ್ಪಂದಕ್ಕೆ ಬರದಿದ್ದರೆ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸುವ ಹಡಗುಗಳ ಮೇಲೆ ಅಮೆರಿಕ ಸುಂಕ ವಿಧಿಸಲಿದೆ ಎಂದು ಭಾನುವಾರ(ಜೂ. 21) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎಚ್ಚರಿಸಿದ್ದಾರೆ.
ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಮುಂದುವರಿದಿರುವ ಬೆನ್ನಲ್ಲೇ ಇರಾನ್ ಮತ್ತೆ ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದಾಗಿ ಶನಿವಾರ ಘೋಷಿಸಿದೆ. ಮತ್ತು ಕದನ ವಿರಾಮ ಒಪ್ಪಂದದ ಹೊರತಾಗಿಯೂ ಇಸ್ರೇಲಿ ದಾಳಿಗಳು ಮುಂದುವರೆದಿವೆ ಎಂದು ಆರೋಪಿಸಿದೆ.
ಈ ಹಿನ್ನೆಲೆ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್​ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಟ್ರಂಪ್, ಕದನ ವಿರಾಮದ ಅವಧಿಯಲ್ಲಿ 60 ದಿನಗಳವರೆಗೆ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಟೋಲ್‌ಗಳು ಇರುವುದಿಲ್ಲ, ಮತ್ತು 60 ದಿನಗಳ ಅವಧಿ ಮುಗಿದ ನಂತರವೂ ಯಾವುದೇ ಟೋಲ್‌ಗಳು ಇರುವುದಿಲ್ಲ, ಆದರೆ ಒಪ್ಪಂದ ಪೂರ್ಣಗೊಳ್ಳದಿದ್ದರೆ ಅಮೆರಿಕ ಸುಂಕ ವಿಧಿಸಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದಲ್ಲಿ 60 ದಿನಗಳ ಕಾಲ ಟೋಲ್ ರಹಿತವಾಗಿ ಹಾರ್ಮುಜ್​ ಜಲಸಂಧಿಯನ್ನು ತೆರೆಯಬೇಕು. ಮತ್ತು ಲೆಬನಾನ್ ಸೇರಿ ಎಲ್ಲಾ ವಲಯಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯ ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ ಇಸ್ರೇಲ್, ಲೆಬನಾನ್ ಮೇಲೆ ಮತ್ತೆ ದಾಳಿ ಮುಂದುವರೆಸಿದ್ದದರಿಂದ ಪ್ರಮುಖ ಜಲಸಂಧಿಯನ್ನು ಇರಾನ್ ಮತ್ತೆ ಮುಚ್ಚುವುದಾಗಿ ಘೋಷಿಸಿದೆ. 
ಇನ್ನೂ ಅಮೆರಿಕ-ಇರಾನ್ ನಡುವಿನ ಅಂತಿಮ ಒಪ್ಪಂದಕ್ಕಾಗಿ ಜಿನೀವಾದಲ್ಲಿ ಮಾತುಕತೆ ನಡೆಯಲಿದ್ದು, ಶನಿವಾರ ಮಧ್ಯಾಹ್ನ ಇರಾನಿನ ನಿಯೋಗವೊಂದು ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಿದೆ ಎನ್ನಲಾಗಿದೆ. ಮತ್ತೆ ಅಮೆರಿಕದಿಂದ ಉಪಾದ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದಲ್ಲಿ ನಿಯೋಗ ತೆರಳಲಿದೆ. ನಿಯೋಗದಲ್ಲಿ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಇರಲಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net