ಟರ್ನ್​, ಬೌನ್ಸ್​... ಸ್ಪಿನ್​, ವೇಗಿಗಳಿಗೆ ಕಮಾಲ್​ ಮಾಡಲು ಇದೇ ಚಾನ್ಸ್​! ಹೀಗಿದೆ ಅಹಮದಾಬಾದ್​ ಪಿಚ್​ ವರದಿ | PITCH

ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ
Published on

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಭಾರತ-ನ್ಯೂಜಿಲೆಂಡ್​ ನಡುವೆ ಟಿ20 ವಿಶ್ವಕಪ್​ ಫೈನಲ್​
  • ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ
  • ಇದರ ಬೆನ್ನಲ್ಲೇ ಅಹಮದಾಬಾದ್​ ಪಿಚ್​ ವರದಿ ಬಗ್ಗೆ ಕುತೂಹಲ
ಗುಜರಾತ್​: ಇದೇ ಭಾನುವಾರ (ಮಾ.08) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಟಿ20 ವಿಶ್ವಕಪ್​ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ನೋಡಲು ಕ್ರಿಕೆಟ್​ ಅಭಿಮಾನಿಗಳಲ್ಲಿ ತೀವ್ರ ಕಾತರ ಮೂಡಿದ್ದು, ಯಾರ ಮುಡಿಗೇರಲಿದೆ 2026 ವಿಶ್ವಕಪ್ ಟ್ರೋಫಿ ಎಂಬ ಕುತೂಹಲ ಕೆರಳಿದೆ. ಈ ಮಧ್ಯೆ, ಅಹಮದಾಬಾದ್​ ಪಿಚ್​ ಭಾರತಕ್ಕೆ ವರವಲ್ಲ! ಬದಲಿಗೆ ಶಾಪ ಎಂಬ ಮಾತುಗಳು ಕ್ರಿಕೆಟ್​ ಅಭಿಮಾನಿಗಳಿಂದ ಕೇಳಿಬಂದಿದ್ದು, ಏನಾಗುತ್ತೋ ದೇವರೇ ಎನ್ನುವಂತೆ ಮಾಡಿದೆ.
ನ್ಯೂಜಿಲೆಂಡ್ ವಿರುದ್ಧದ ಫೈನಲ್​ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದಷ್ಟು ಬದಲಾವಣೆಗಳನ್ನು ತರಬೇಕಿದೆ ಎಂದಿರುವ ಕ್ರಿಕೆಟ್​ ಪ್ರಿಯರು, ಮಿಸ್ಟರಿ ಸ್ಪಿನ್ನರ್​ ವರುಣ್ ಚಕ್ರವರ್ತಿ ಬದಲಿಗೆ ಕುಲದೀಪ್ ಯಾದವ್​ರನ್ನು ಕರೆತನ್ನಿ ಎಂದಿದ್ದಾರೆ. ಇದರೊಟ್ಟಿಗೆ, ತಂಡದಲ್ಲಿ ಅರ್ಷದೀಪ್ ಸಿಂಗ್ ಬದಲು ಮೊಹಮ್ಮದ್​ ಸಿರಾಜ್​ರನ್ನು ಆಡಿಸಿ ಎಂದು ಸಲಹೆ ನೀಡಿದ್ದಾರೆ. ಕುಲದೀಪ್​ ಮತ್ತು ಸಿರಾಜ್​ ಏಕೆ ಎಂಬುದಕ್ಕೆ ಕ್ರಿಕೆಟ್​ ಪ್ರೇಮಿಗಳು ನೀಡಿರುವ ಕಾರಣವೇ ಅಹಮದಾಬಾದ್​ ಪಿಚ್​.
ಈ ಪಿಚ್​ನಲ್ಲಿ ಆಡುವುದು ಅಷ್ಟು ಸುಲಭವಲ್ಲ. ಇಲ್ಲಿ ಬ್ಯಾಟಿಂಗ್​ಗಿಂತಲೂ ಬೌಲಿಂಗ್​ಗೆ ಹೆಚ್ಚು ಅವಕಾಶವಿದೆ. ವೇಗಿಗಳು ಮತ್ತು ಸ್ಪಿನ್ನರ್​ಗಳು ತಮ್ಮ ಕೈಚಳಕ ತೋರಲು ಉತ್ತಮ ಅವಕಾಶ ಎಂದಿದ್ದಾರೆ. ಇದರ ಬೆನ್ನಲ್ಲೇ ಪಿಚ್ ವರದಿ ಹೊರಬಿದ್ದಿದೆ. ನರೇಂದ್ರ ಮೋದಿ ಮೈದಾನದಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನ ಮಿಶ್ರಣವಿದೆ. ಪ್ರತಿ ಮಣ್ಣು ಒಂದೊಂದು ರೀತಿ ವರ್ತಿಸುತ್ತದೆ. ಅಂದರೆ, ಆಟಗಾರರಿಗೆ ಹೇಗೆ ಬೇಕಾದರೂ ವರದಾನ ಆಗಬಹುದು ಎನ್ನುವಂತಿದೆ.
ಸಾಮಾನ್ಯವಾಗಿ, ಕೆಂಪು ಮಣ್ಣಿನ ಪಿಚ್​ಗಳು ವೇಗ ಮತ್ತು ಬೌನ್ಸ್​ಗಳಿಗೆ ಅನುಕೂಲಕರವಾಗಿದೆ. ಇನ್ನು ಕಪ್ಪು ಮಣ್ಣು ಬ್ಯಾಟರ್​ಗಳಿಗೆ ಕೊಂಚ ಪರದಾಡುವಂತೆ ಮಾಡುವ ಸಾಧ್ಯತೆಗಳಿವೆ. ಇದು ಯಾವ ತಂಡಕ್ಕೆ ಹೇಗೆ ಫಲಿಸಲಿದೆ ಎಂಬುದು ಟಾಸ್​ ಮೇಲೂ ನಿಂತಿದೆ. ಕಾರಣ, ಮೊದಲು ಬ್ಯಾಟ್​ ಅಥವಾ ಬೌಲಿಂಗ್ ಮಾಡುವವರ ಲೆಕ್ಕಾಚಾರಗಳು ಈಡೇರುವ ಸಾಧ್ಯತೆಗಳು ಹೆಚ್ಚಿದೆ.

ವೇಗಿಗಳು ಬಹುಬೇಗ ವಿಕೆಟ್​ ಪಡೆಯಬಹುದು

ಈ ಮಿಶ್ರಿತ ಮಣ್ಣಿನ ಪಿಚ್​ನಲ್ಲಿ ಬೌಲರ್​ಗಳು ಹೊಸ ಬಾಲ್​ನಲ್ಲಿ ತಮ್ಮದೇ ಪ್ರಯೋಗಗಳನ್ನು ಮಾಡಬಹುದು. ಮತ್ತು ಪವರ್​ಪ್ಲೇ ಹಂತದಲ್ಲೇ ವಿಕೆಟ್​ ಕಬಳಿಸಬಹುದು. ಅತಿ ಮುಖ್ಯವಾಗಿ, ಟೀಮ್ ಇಂಡಿಯಾದ ವೇಗಿಗಳಾದ ಬುಮ್ರಾ ಮತ್ತು ಅರ್ಷದೀಪ್​ ಸಿಂಗ್​ಗೆ ಇದು ಉತ್ತಮ ಅವಕಾಶ ಎಂದೇ ಹೇಳಬಹುದು.

ಮಧ್ಯ ಓವರ್​ಗಳಲ್ಲಿ ಸ್ಪಿನ್ನರ್​ಗಳದ್ದೇ ಆಟ

ಈ ಪಿಚ್​ ಆರಂಭದಲ್ಲಿ ವೇಗಿಗಳ ಪರವಾದರೆ, ಮಧ್ಯಮ ಓವರ್​ಗಳಲ್ಲಿ ಸ್ಪಿನ್ನರ್​ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಇಲ್ಲಿ ತಮ್ಮ ಬುದ್ಧಿವಂತಿಕೆ ಹಾಗೂ ಕೌಶಲ್ಯವನ್ನು ಬಳಸಿದರೆ, ಸ್ಪಿನ್​ ಮಾಂತ್ರಿಕರು ತಮ್ಮ ತಂಡದ ಪರ ಕಮಾಲ್ ಮಾಡಬಹುದು.

200 ರನ್​+ ಸ್ಕೋರ್​

ವರದಿಗಳ ಪ್ರಕಾರ, ಅಹಮದಾಬಾದ್​ ಪಿಚ್​ನಲ್ಲಿ ಗರಿಷ್ಠ 200 ರನ್​ ಸ್ಕೋರ್​ ಮಾಡಬಹುದು ಎನ್ನಲಾಗಿದೆ. ಒಟ್ಟಾರೆ, ನಾಳಿನ ಪಂದ್ಯದಲ್ಲಿ ಯಾರು ಟಾಸ್​ ಗೆಲ್ತಾರೆ? ಯಾರಿಗೆ ಪಿಚ್​ ವರದಾನ ಆಗಲಿದೆ? ಪಂದ್ಯ ಎಷ್ಟು ರೋಚಕವಾಗಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net