More

    ಪತ್ರಕರ್ತ ಅರ್ನಬ್​ ಗೋಸ್ವಾಮಿ ವಿರುದ್ಧದ ಎಫ್​ಐಆರ್​ಗೆ ಸುಪ್ರೀಂ ತಡೆ: ರಕ್ಷಣೆ ನೀಡುವಂತೆ ಮುಂಬೈ ಪೊಲೀಸರಿಗೆ ಕೋರ್ಟ್​ ನಿರ್ದೇಶನ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಪತ್ರಕರ್ತ ಅರ್ನಬ್​ ಗೋಸ್ವಾಮಿ ಅವರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡದಂತೆ ಪೊಲೀಸರಿಗೆ ಸುಪ್ರೀಂಕೋರ್ಟ್​ ಆದೇಶಿಸಿದೆ.

    ಪಾಲ್ಗರ್‌ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅರ್ನಬ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಇದನ್ನು ಅವರು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಇದಕ್ಕೀಗ ಕೋರ್ಟ್​ ತಡೆ ನೀಡಿದೆ. ಜತೆಗೆ, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಅರ್ನಬ್​ಗೆ ಕೋರ್ಟ್​ ಸೂಚಿಸಿದೆ.

    ಪಾಲ್ಗರ್‌ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆಯ ವಿಷಯದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಅರ್ನಬ್ ತೆಗೆದುಕೊಂಡಿದ್ದರು. ಈ ಕುರಿತು ತಮ್ಮ ರಿಪಬ್ಲಿಕ್​ ಟಿವಿಯಲ್ಲಿ ಚರ್ಚಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಅರ್ನಬ್​ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅನೇಕರು ಟ್ವಿಟ್ಟರ್‌ನಲ್ಲಿ #ArrestAntiIndiaArnab ಹಾಗೂ #arrestarnabgoswami ಎಂಬ ಹ್ಯಾಶ್ ಟ್ಯಾಗ್‌ಗಳ ಮೂಲಕ ಅರ್ನಬ್​ ಬಂಧನಕ್ಕೆ ಆಗ್ರಹಿಸಿದ್ದರು.

    ಇದಕ್ಕೆ ಸಂಬಂಧಿಸಿದಂತೆ ಛತ್ತೀಸಗಡ, ರಾಜಸ್ಥಾನ, ಪಂಜಾಬ್​, ತೆಲಂಗಾಣ ಮತ್ತು ಜಮ್ಮು, ಕಾಶ್ಮೀರದಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಇದಕ್ಕೆ ತಡೆ ನೀಡುವಂತೆ ಕೋರಿದ್ದ ಮನವಿಯನ್ನು ಸುಪ್ರೀಂಕೋರ್ಟ್​ ಮಾನ್ಯ ಮಾಡಿದೆ.

    ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.

    ದೆಹಲಿಯಿಂದ ನಾಗ್ಪುರಕ್ಕೆ ವಿಚಾರಣೆಗೆಂದು ಹೋಗಿ ಬರುವುದು ಕಷ್ಟಸಾಧ್ಯವಾಗುವ ಕಾರಣ, ತಮ್ಮ ವಿರುದ್ಧ ದಾಖಲಾಗಿರುವ ಕೇಸಿಗೆ ಸಂಬಂಧಿಸಿದ ತನಿಖೆಯನ್ನು ಮುಂಬೈಗೆ ವರ್ಗಾಯಿಸುವಂತೆ ಅರ್ನಬ್​ ಕೋರಿದ್ದರು. ಅದನ್ನೂ ಕೋರ್ಟ್​ ಮಾನ್ಯ ಮಾಡಿದೆ.

    ಎರಡು ದಿನಗಳ ಹಿಂದೆ ಅರ್ನಬ್​ ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಲಾಗಿತ್ತು. ಈ ವಿಷಯದ ಬಗ್ಗೆಯೂ ವಿಚಾರಣೆ ವೇಳೆ ಅವರ ಪರ ವಕೀಲರು ಕೋರ್ಟ್​ ಗಮನಕ್ಕೆ ತಂದು, ಪೊಲೀಸ್​ ರಕ್ಷಣೆ ಒದಗಿಸುವಂತೆ ಕೋರಿದರು. ಅದನ್ನೂ ಕೋರ್ಟ್​ ಮಾನ್ಯ ಮಾಡಿದ್ದು, ರಕ್ಷಣೆ ನೀಡುವಂತೆ ಮುಂಬೈ ಪೊಲೀಸರಿಗೆ ಆದೇಶಿಸಿದೆ. ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್​ ನೇತೃತ್ವದ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts