More

    ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು : ಸಚಿವ ಮಾಧುಸ್ವಾಮಿ ಎಚ್ಚರಿಕೆ

    ತಿಪಟೂರು: ಗ್ರಾಮಸ್ಥರು ಕರೊನಾ ಭೀಕರತೆ ಮನಗಂಡು, ಸರ್ಕಾರದ ನಿಯಮ ಪಾಲಿಸದಿದ್ದರೆ ಇಡೀ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೊನಾ ನಿಯಂತ್ರಣ ಕುರಿತು ಗುರುವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಹಳ್ಳಿಗಳಿಗೆ ಹೊರಭಾಗದಿಂದ ಯಾರೇ ಬಂದರೂ ಕನಿಷ್ಠ 2 ದಿನ ತೋಟ, ಜಮೀನಿನಲ್ಲಿ ಇರಬೇಕು, ತಕ್ಷಣ ಅವರ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಬೇಕು. ಇದಕ್ಕೆ ಒಪ್ಪದೆ, ಅಧಿಕಾರಿಗಳ ಬಳಿ ಅನುಚಿತವಾಗಿ ವರ್ತಿಸಿದರೆ ಕೇಸ್ ದಾಖಲಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣಗೆ ಸೂಚಿಸಿದರು.

    ಅಧಿಕಾರಿಗಳು ಇತರರಿಗೆ ಸರ್ಕಾರದ ಆದೇಶ ವರ್ಗಾವಣೆ ಮಾಡದೆ ಖುದ್ದುನಿಗಾ ವಹಿಸಬೇಕು, ಇಲ್ಲವಾದಲ್ಲಿ ಸರ್ಕಾರದ ಇಡೀ ಯೋಜನೆ ವಿಫಲವಾಗುತ್ತೆ ಎಂದರು. ಸೀಲ್‌ಡೌನ್ ಪ್ರದೇಶವನ್ನು ನಗರಸಭೆ ನೌಕರರು ಸ್ವಚ್ಛ ಮಾಡುತ್ತಾರೆ, ಹಸು, ಕರು, ಎಮ್ಮೆ, ಮೇಕೆ ಇದ್ದ ಮೇಲೆ ಕಸ ಇದ್ದೇ ಇರುತ್ತೆ, ಕೂಡಲೇ ಸೀಲ್‌ಡೌನ್ ಆಗಿರುವ ಹಳ್ಳಿಗಳ ಸ್ವಚ್ಛತೆಗೂ ಗಮನ ಕೊಡಿ. ಒಮ್ಮೆ ಬಳಸಬಹುದಾದ, ನೂತನವಾಗಿ ಪರಿಚಯಿಸಿರುವ ರ‌್ಯಾಪಿಡ್ ಯೂನಿಟ್ ಟೆಸ್ಟ್ ಕಿಟ್‌ಗಳನ್ನು ಹೆಚ್ಚು ಸಂಖ್ಯೆಯಲ್ಲಿ ತಾಲೂಕುಗಳಿಗೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಕೊನೇಹಳ್ಳಿ ಮುರಾರ್ಜಿ ವಸತಿ ನಿಲಯದಲ್ಲಿ 116 ಹಾಸಿಗೆಯ ಕೋವಿಡ್ ಆಸ್ಪತ್ರೆ, ಹೆಚ್ಚುವರಿಯಾಗಿ ಹೊನ್ನವಳ್ಳಿ ರಸ್ತೆಯ ಕಾವಲಿನಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ 150 ಹಾಸಿಗೆಗಳ ಕೋವಿಡ್ ಆಸ್ಪತ್ರೆ ತೆರೆಯಬಹುದು ಎಂದು ಉಪವಿಭಾಗಾಧಿಕಾರಿ ಕೆ.ಅರ್.ನಂದಿನಿ ತಿಳಿಸಿದರು.

    ಐಸಿಯು ಸಿದ್ಧಮಾಡಿಕೊಳ್ಳಿ: ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕನಿಷ್ಠ 6 ಐಸಿಯು ಘಟಕ, 3 ವೆಂಟಿಲೇಟರ್ ಇರುವುದು ಕಡ್ಡಾಯ. ಆದರೆ ನಗರದ ಆಸ್ಪತ್ರೆಯಲ್ಲಿ ಕೇವಲ 3 ಐಸಿಯು ಮತ್ತು ಒಂದು ವೆಂಟಿಲೇಟರ್ ಇರುವ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ 100 ಹಾಸಿಗೆ ಆಸ್ಪತ್ರೆ ಎಂದು ಕರೆಸಿಕೊಂಡರೆ ಸಾಲದು. ಕೂಡಲೇ ನೆಲ ಅಂತಸ್ತಿನಲ್ಲಿ ಮೂರು ವೆಂಟಿಲೇಟರ್ ಮತ್ತು 6 ಸುಸಜ್ಜಿತ ಐಸಿಯುಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಒಂದೂವರೆ ವರ್ಷದಿಂದ ಕರ್ತವ್ಯಕ್ಕೆ ಗೈರಾಗಿ, ಕಡೂರಿನಲ್ಲಿ ಖಾಸಗಿಯಾಗಿ ಕೆಲಸ ಮಾಡುತ್ತಿರುವ ಅರವಳಿಕೆ ತಜ್ಞೆ ಡಾ.ಗೋಮತಿ ಅವರನ್ನು ಕೂಡಲೇ ಬಿಡುಗಡೆ ಮಾಡಿ ಇಲಾಖೆ ಕ್ರಮಕ್ಕೆ ಶಿಫಾರಸು ಮಾಡಿ.
    ಬಿ.ಸಿ.ನಾಗೇಶ್ ಶಾಸಕ

    ತಿಪಟೂರು ನಗರದಲ್ಲಿ 82, ದಸರೀಘಟ್ಟ, ಅರಳಗುಪ್ಪೆ, ಬಿಳಿಗೆರೆ, ಏಚನೂರು, ಮತ್ತಿಘಟ್ಟ, ರಾಮಚಂದ್ರಾಪುರ, ಸೇರಿ ತಾಲೂಕಿನಲ್ಲಿ 282 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 21 ಕಡೆ ಸೀಲ್‌ಡೌನ್ ಮಾಡಲಾಗಿದೆ.
    ಬಿ.ಆರತಿ ತಹಸೀಲ್ದಾರ್, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts