More

    ಕರೊನಾ ವಾರಿಯರ್ಸ್‌ಗೆ ತಲಾ 5 ಸಾವಿರ ರೂ. ಧನಸಹಾಯ

    ರಾಮನಗರ: ಜೀವದ ಹಂಗು ತೊರೆದು ಕರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ನರ್ಸ್‌ಗಳಿಗೆ ತಲಾ 5 ಸಾವಿರ ರೂ. ಧನಸಹಾಯ ನೀಡುವ ಮೂಲಕ ಸಹಕಾರ ಸಂಘಗಳು ಅವರ ಪ್ರೋತ್ಸಾಹಕ್ಕೆ ಮತ್ತು ನೆರವಿಗೆ ನಿಂತಿವೆ ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ತಿಳಿಸಿದರು.

    ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ನರ್ಸ್‌ಗಳಿಗೆ ಮಂಗಳವಾರ ಅಭಿನಂದನೆ ಸಲ್ಲಿಸಿ ಚೆಕ್ ವಿತರಿಸಿ ಮಾತನಾಡಿದರು.

    ಕಡಿಮೆ ಸಂಬಳ ಪಡೆದು ಸರ್ಕಾರದ ಹಲವು ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನ ಮಾಡುವಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ದೇಶದೆಲ್ಲೆಡೆ ವ್ಯಾಪಿಸುತ್ತಿರುವ ಕರೊನಾ ತಡೆಯಲು ಮನೆ ಮನೆಗೆ ತೆರಳಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಸಿದರು.

    ತಾಲೂಕಿನಾದ್ಯಂತ 52 ನರ್ಸ್‌ಗಳಿಗೆ ಮತ್ತು 210 ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯ 185 ಹಾಲು ಉತ್ಪಾದಕ ಸಹಕಾರ ಸಂಘಗಳ ಸಹಕಾರದಿಂದ ತಲಾ 5 ಸಾವಿರ ರೂ. ಮತ್ತು ಮಾಸ್ಕ್ ವಿತರಿಸಲಾಗುತ್ತಿದೆ. ಈ ಕಾರ್ಯಕ್ಕೆ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳು ಕೈಜೋಡಿಸಲು ಮುಂದಾಗಿದ್ದಾರೆ. ಇಂತಹ ಕಾರ್ಯಕ್ರಮ ಆರಂಭಿಸಿರುವುದು ರಾಜ್ಯದಲ್ಲೇ ಮೊದಲು. ಈ ನೆಲದಲ್ಲಿ ಸಹಕಾರ ಕ್ಷೇತ್ರದಲ್ಲಿ ಮಾಡಿದ ಹಲವು ಪ್ರಯೋಗಗಳು ಸರ್ಕಾರದ ಜನಪರ ಕಾರ್ಯಕ್ರಮವಾಗಿ ಯಶಸ್ವಿಯಾಗಿವೆ ಎಂದರು.

    ರಾಜ್ಯಾದ್ಯಂತ ಇರುವ ಸಹಕಾರ ಸಂಘಗಳು ಆರ್ಥಿಕವಾಗಿ ಬಲಿಷ್ಠವಾಗಿವೆ. ಇಂತಹ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಇಂತಹ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಪ್ರತಿನಿಧಿಗಳಿಗೆ ಸೂಚನೆ ನೀಡಬೇಕು. ಆ ಮೂಲಕ ಆಶಾ ಕಾರ್ಯಕರ್ತೆಯರು ಮತ್ತು ನರ್ಸ್‌ಗಳ ನೆರವಿಗೆ ನಿಲ್ಲಬೇಕು. ಆಗ ಕರೋನಾ ನಿಯಂತ್ರಣ ಕಾರ್ಯಕ್ರಮದ ಸೇವೆಯಲ್ಲಿ ಅವರನ್ನು ಗುರುತಿಸಿದಂತಾಗುತ್ತದೆ ಎಂದು ಮನವಿ ಮಾಡಿದರು.

    ಬಮುಲ್‌ನ ಬಿಡದಿ ಶಿಬಿರ ವ್ಯವಸ್ಥಾಪಕ ಡಾ.ಶಿವಶಂಕರ್, ಗ್ರಾಪಂ ಸದಸ್ಯ ಸಿರಿ, ವಿವಿಧ ಎಂಪಿಸಿಎಸ್‌ಗಳ ಸಿಇಒಗಳಾದ ರಾಮಚಂದ್ರಯ್ಯ, ಮಂಜು, ಮೂರ್ತಿ. ಪರಮಶಿವಯ್ಯ, ನರಸಿಂಹ ಮೂರ್ತಿ, ಆಶಾ ಕಾರ್ಯಕರ್ತೆಯರು ಮತ್ತು ನರ್ಸ್‌ಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts